ಪಾಕಿಸ್ತಾನದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮುಹಮ್ಮದ್ ವಸೀಂ ನೇಮಕ

ಕರಾಚಿ: ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಮುಹಮ್ಮದ್ ವಸೀಂ ಅವರನ್ನು ಭಾರತದಲ್ಲಿ 2023ರಲ್ಲಿ ನಡೆಯುವ ವಿಶ್ವಕಪ್ ತನಕ ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ವಸೀಂ ಅವರು ಮಿಸ್ಬಾವುಲ್ ಹಕ್‌ರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಶನಿವಾರ ತಿಳಿಸಿದೆ.
ಮಿಸ್ಬಾ ಅವರು ಸುಮಾರು ಒಂದು ವರ್ಷಗಳ ಕಾಲ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಹಾಗೂ ಮುಖ್ಯ ಕೋಚ್ ಆಗಿ ಎರಡು ಹುದ್ದೆಯನ್ನು ನಿಭಾಯಿಸಿದ್ದರು. ಪಾಕಿಸ್ತಾನದ ಮುಖ್ಯ ಕೋಚ್ ಹುದ್ದೆಯತ್ತ ಹೆಚ್ಚು ಗಮನ ಹರಿಸಲು ಕಳೆದ ತಿಂಗಳು ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು.
‘‘ನಮ್ಮ ಪ್ರತಿಭಾವಂತ ಕ್ರಿಕೆಟಿಗರನ್ನು ಬೆಳೆಸಲು, ನಾಯಕತ್ವದ ಅವಕಾಶವನ್ನು ಕಲ್ಪಿಸುವ ನಮ್ಮ ರಣತಂತ್ರದ ಭಾಗವಾಗಿ ವಸೀಂ ಅವರ ಆಯ್ಕೆ ಮಾಡಲಾಗಿದೆ’’ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ವಸೀಂ ಖಾನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ನಾರ್ತ್ ಕ್ರಿಕೆಟ್ ಅಸೋಸಿಯೇಶನ್‌ನ ಮುಖ್ಯ ಕೋಚ್ ಆಗಿರುವ ವಸೀಂ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶಿ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಿದ್ದಾರೆ.







