ಡಿ. 22ರಂದು ದ.ಕ.ಜಿಲ್ಲೆಯ 106 ಗ್ರಾಪಂಗೆ ಚುನಾವಣೆ; 3,854 ಅಭ್ಯರ್ಥಿಗಳು ಕಣದಲ್ಲಿ
ಮಂಗಳೂರು, ಡಿ.20: ದ.ಕ.ಜಿಲ್ಲೆಯ 106 ಗ್ರಾಪಂಗಳ 1,631 ಸ್ಥಾನಗಳಿಗೆ ಮೊದಲ ಹಂತದಲ್ಲಿ ಡಿ.22ರಂದು ಚುನಾವಣೆ ನಡೆಯಲಿದ್ದು, 3,854 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮಂಗಳೂರು ತಾಲೂಕಿನ 37, ಮೂಡಬಿದಿರೆಯ 12, ಬಂಟ್ವಾಳದ 57 ಗ್ರಾಪಂನ 1,681 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ 50 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾದ ಕಾರಣ 1,631 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮತದಾನವು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದೆ.
ಅನುಸೂಚಿತ ಜಾತಿಯ 238, ಅನುಸೂಚಿತ ಪಂಗಡದ 215 ಹಾಗೂ ಹಿಂದುಳಿದ ‘ಅ’ ವರ್ಗದ 958, ಹಿಂದುಳಿದ ‘ಬಿ’ ವರ್ಗದ 226, ಸಾಮಾನ್ಯ 2,217 ಸಹಿತ ಒಟ್ಟು 3,854 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಮೊದಲ ಹಂತದಲ್ಲಿ ನಡೆಯುವ ಚುನಾವಣೆಗೆ ಮಂಗಳೂರಿನ 322, ಮೂಡುಬಿದಿರೆಯ 99, ಬಂಟ್ವಾಳದ 396 ಸಹಿತ 817 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅಲ್ಲದೆ 1350 ಮತಪೆಟ್ಟಿಗೆಗಳನ್ನು ತೆರೆಯಲಾಗುತ್ತದೆ.
ಮಂಗಳೂರಿನಲ್ಲಿ 1,03,783 ಪುರುಷರು ಮತ್ತು 1,10,103 ಮಹಿಳೆಯರು ಹಾಗೂ 10 ಇತರರ ಸಹಿತ 2,13,896 ಮಂದಿ ಮತ ಚಲಾಯಿ ಸಲಿದ್ದಾರೆ. ಮೂಡುಬಿದಿರೆಯಲ್ಲಿ 1,35,186 ಪುರುಷರು ಮತ್ತು 1,38,228 ಮಹಿಳೆಯರು ಹಾಗೂ 10 ಇತರರ ಸಹಿತ 2,73,424 ಮಂದಿ ಹಕ್ಕು ಚಲಾಯಿಸಲಿದ್ದಾರೆ. ಬಂಟ್ವಾಳದಲ್ಲಿ 99,518 ಪುರುಷರು ಮತ್ತು 99,854 ಮಹಿಳೆಯರ ಸಹಿತ 1,99,372 ಮಂದಿ ಮತ ಚಲಾಯಿಸಲಿದ್ದಾರೆ.
ಅವಿರೋಧ ಆಯ್ಕೆ
ಮಂಗಳೂರು ತಾಲೂಕಿನಲ್ಲಿ 28 ಮಂದಿ ಅವಿರೋಧ ಆಯ್ಕೆಯಾಗಿದ್ದು, 1,510 ಮಂದಿ ಕಣದಲ್ಲಿದ್ದಾರೆ. ಮೂಡುಬಿದಿರೆಯಲ್ಲಿ 7 ಮಂದಿ ಅವಿರೋಧ ಆಯ್ಕೆಯಾಗಿದ್ದು, 419 ಮಂದಿ ಕಣದಲ್ಲಿದ್ದಾರೆ. ಬಂಟ್ವಾಳದ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 1,925 ಮಂದಿ ಕಣದಲ್ಲಿದ್ದಾರೆ.







