ಹೊಸ ಶಿಕ್ಷಣ ನೀತಿ ಅಂತಿಮಗೊಂಡಿಲ್ಲ : ಬೇಳೂರು ಸುದರ್ಶನ
ಮಂಗಳೂರು, ಡಿ.20: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಕರಡು ಹಂತದಲ್ಲಿದ್ದು, ಇನ್ನೂ ಅಂತಿಮಗೊಂಡಿಲ್ಲ. ಈ ನೀತಿಯ ಸಾಧಕ, ಬಾಧಕ ಬಗ್ಗೆ ಚಿಂತನ-ಮಂಥನ ನಡೆಸಿ ಅಂತಿಮಗೊಳಿಸಲಾಗುವುದು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಪೋರ್ಟಲ್ ಸದಸ್ಯ ಹಾಗೂ ರಾಜ್ಯ ಸರಕಾರದ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಹೇಳಿದ್ದಾರೆ.
ಮೈಸೂರಿನ ಸಾಹಿತ್ಯ ಸುಧೆ ಪ್ರಕಾಶನ ಪ್ರಕಟಿಸಿದ ಪ್ರೊ.ಎ.ಎಂ.ನರಹರಿಯವರ ‘ಶಿಕ್ಷಣ ಮನ್ವಂತರ-ರಾಷ್ಟ್ರೀಯ ಶಿಕ್ಷಣ ನೀತಿ-2020’ಕೃತಿ ಕುರಿತಂತೆ ರವಿವಾರ ನಗರದ ಅಮುಕ್ತ್ ಕಚೇರಿಯಲ್ಲಿ ನಡೆದ ಶಿಕ್ಷಣ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯನ್ನು ಜನತೆಗೆ ತಲುಪಿಸಲು ಪ್ರಯತ್ನ ಸಾಗಿದೆ. ಈಗಾಗಲೇ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ತಿಳಿವಳಿಕೆ ಮೂಡಿಸುವ ಕಾರ್ಯ ನಡೆಸಿದೆ. ಮೈಎನ್‌ಇಪಿ ಡಾಟ್ ಇನ್ ವೆಬ್ ಪೋರ್ಟಲ್‌ನಲ್ಲಿ 35ಕ್ಕೂ ಹೆಚ್ಚು ವೆಬಿನಾರ್‌ಗಳನ್ನು ಮಾಡಿದೆ. ಮುಂದೆ ಯುಜಿಸಿ ಐಎನ್‌ಐ ಮುಖ್ಯಸ್ಥರೊಂದಿಗೆ ಸಮುದಾಯ ಮತ್ತು ಶಿಕ್ಷಣ ಬಗ್ಗೆ ಚರ್ಚೆ ನಡೆಸಲಿದೆ. ಈ ಹಿಂದಿನ ಶಿಕ್ಷಣ ನೀತಿಗಳ ಪರಿಣಾಮ ಮತ್ತು ಜಾಗತಿಕ ಆಗು ಹೋಗುಗಳನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರಕಾರ ಈ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಿದೆ ಎಂದು ಬೇಳೂರು ಸುದರ್ಶನ ಅಭಿಪ್ರಾಯಪಟ್ಟರು.
ಭರತವಾಣಿ ಯೋಜನೆಯಡಿ ಸ್ಥಳೀಯ ಮಾತೃ ಭಾಷೆಗಳಿಗೆ ಒತ್ತು ನೀಡಲಾಗುತ್ತದೆ. ಉತ್ತರ ಭಾರತ ರಾಜ್ಯಗಳ ಬುಡಕಟ್ಟು ಜನತೆಯ ಅಳಿವಿನಂಚಿನ ಭಾಷೆಗಳನ್ನು ಉಳಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಬುಟಕಟ್ಟು ಭಾಷೆಗಳ ಪಠ್ಯಪುಸ್ತಕ ರಚನೆ ಯಾಗಿದ್ದು, ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆ ಕಲಿಕೆ ಚೆನ್ನಾಗಿ ನಡೆಯುತ್ತಿದೆ ಎಂದು ಬೇಳೂರು ಸುದರ್ಶನ ಹೇಳಿದರು.
ರಾಷ್ಟ್ರೀಯ ಅಧಿಸೂಚನೆಯಲ್ಲಿ ಭಾಷೆ ಇದ್ದರೂ ಪಠ್ಯ ಇರುವುದಿಲ್ಲ. ದೇಶದ ಜನಗಣತಿಯಲ್ಲಿ 120 ಭಾಷೆಗಳನ್ನು ಗುರುತಿಸಿದ್ದು, 2021ರ ಜನಗಣತಿಯಲ್ಲಿ ಮಾತೃ ಭಾಷೆಯನ್ನು ದಾಖಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಅರವಿಂದ ಚೊಕ್ಕಾಡಿ ಸೆಮಿಸ್ಟರ್ ಪದ್ಧತಿ ಬಂದ ಮೇಲೆ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಸಮಸ್ಯೆ ತಲೆದೋರಿದೆ. ಹೊಸ ಶಿಕ್ಷಣ ನೀತಿಯಲ್ಲಿ ವಿವಿ ಮತ್ತು ಕಾಲೇಜನ್ನು ಪ್ರತ್ಯೇಕಿಸಿರುವುದು ಉತ್ತಮವಾದರೂ ಪಿಯುಸಿ ವ್ಯವಸ್ಥೆ ತೆಗೆದು ಹಾಕಲಾ ಗಿದೆ. ಇದೇ ರೀತಿ ಶಿಕ್ಷಕರನ್ನು ವೌಲ್ಯಮಾಪನಕ್ಕೆ ಒಳಪಡಿಸುವುದು ಅತ್ಯುತ್ತಮವಾದರೂ ಅವರಿಗೆ ಅಧ್ಯಯನಕ್ಕೆ ಅವಕಾಶ ಇಲ್ಲದಿದ್ದರೆ ಅದು ಶಿಕ್ಷಕರಿಗೇ ತಿರುಗಬಾಣವಾದೀತು ಎಂದರು.
ಪ್ರೊ.ಎಂ.ಎಂ.ನರಹರಿ ಕೃತಿಯ ಕುರಿತು ಮಾತನಾಡಿದರು.







