ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಮಂಗಳೂರು, ಡಿ.20: ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ನಗರದ ಮೀನುಗಾರಿಕಾ ಬಂದರಿನಲ್ಲಿರುವ ಮತ್ಸ್ಯಗಂಧ ಸಂಕೀರ್ಣದಲ್ಲಿ ರವಿವಾರ ನಡೆಯಿತು.
ಮೀನುಗಾರ ಮುಖಂಡ ದಿ. ಲೋಕನಾಥ್ ಬೋಳಾರ್ ಅವರಿಗೆ ಮತ್ಸ್ಯಗಂಧ ಸಂಕೀರ್ಣದಲ್ಲಿ ಸಮರ್ಪಿಸಿದ ಸಭಾ ವೇದಿಕೆಯನ್ನು ದಿ.ಲೋಕನಾಥ್ ಬೋಳಾರ್‌ರ ಪತ್ನಿ ಡಾ.ಶ್ರೀದೇವಿ ಹಾಗೂ ಪುತ್ರ ಪವನ್ ಲೋಕನಾಥ್ ಬೋಳಾರ್ ಉದ್ಘಾಟಿಸಿದರು.
ಸಂಘದ ಸದಸ್ಯರಾಗಿರುವ ಮೀನುಗಾರ ಸಮುದಾಯದ ಪ್ರತಿಭಾವಂತ 19 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಇಂಜಿನಿಯರಿಂಗ್, ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಟಿಶನ್ ಕುಮಾರ್ ವಾರ್ಷಿಕ ವರದಿ ವಾಚಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ನೂತನ ಅಧ್ಯಕ್ಷ ಉಮೇಶ್ ಟಿ. ಕರ್ಕೆರಾ ಮಾತನಾಡಿ ಕೊರೋನ ಸಹಿತ ನಾನಾ ಸಂಕಷ್ಟಗಳ ನಡುವೆ ಸಂಘ ಉತ್ತಮವಾಗಿ ಸಾಗುತ್ತಿದೆ. ಸಂಘ ಈ ವರ್ಷ ಉತ್ತಮ ವಹಿವಾಟು ನಡೆಸುವ ಮೂಲಕ ಸದಸ್ಯರಿಗೆ ವ್ಯವಹಾರ ಅಭಿವೃದ್ಧಿ ನಿಧಿಯಿಂದ ಬಂಗಾರ ನಾಣ್ಯಗಳನ್ನು ನೀಡಲಾಗುತ್ತದೆ ಎಂದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಕಾಶಿನಾಥ್ ಎನ್. ಕರ್ಕೆರ ಬೊಕ್ಕಪಟ್ಣ, ಕಮಲಾಕ್ಷ ಅಮೀನ್ ಬೋಳಾರ, ಬಾಬು ಸಾಲ್ಯಾನ್ ಉಳ್ಳಾಲ, ಮನೋಹರ್ ಬೋಳೂರು, ದೇವಾನಂದ ಬಿ. ಬೋಳೂರು, ಶಿವಾನಂದ ಬೋಳಾರ, ಶ್ಯಾಮ್ ಲಾಲ್ ಬೋಳೂರು ಉಪಸ್ಥಿತರಿದ್ದರು.







