ಚಿಕ್ಕಮಗಳೂರು: 209 ಗ್ರಾಪಂ ಪೈಕಿ 194 ಗ್ರಾಮ ಪಂಚಾಯತ್‍ಗಳಿಗೆ ಮಂಗಳವಾರ ಚುನಾವಣೆ
15 ಗ್ರಾಮ ಪಂಚಾಯತ್ ಗಳಿಂದ ಚುನಾವಣೆ ಬಹಿಷ್ಕಾರ
ಚಿಕ್ಕಮಗಳೂರು, ಡಿ.20: ಕಾಫಿನಾಡಿನಲ್ಲಿ ಗ್ರಾಮಪಂಚಾಯತ್ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಜಿಲ್ಲೆಯಲ್ಲಿರುವ 209 ಗ್ರಾಮಪಂಚಾಯತ್‍ಗಳ ಪೈಕಿ 194 ಗ್ರಾಮ ಪಂಚಾಯತ್‍ಗಳಿಗೆ ಡಿ.22ರಂದು ಮಂಗಳವಾರ ಮೊದಲ ಹಂತದಲ್ಲೇ ಚುನಾವಣೆ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರೆ, ಮತ್ತೊಂದರೆ ಚುನಾವಣಾ ಕಣದಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಅಭ್ಯರ್ಥಿಗಳು ಮತದಾರರನ್ನು ಒಲಿಸಿಕೊಳ್ಳಲು ವಿವಿಧ ಕಸರತ್ತುಗಳ ಮೊರೆ ಹೋಗಿದ್ದಾರೆ.
ಜಿಲ್ಲೆಯಲ್ಲಿನ 209 ಗ್ರಾಮ ಪಂಚಾಯತ್‍ಗಳಿಗೆ ಈ ಬಾರಿ ಒಂದೇ ಹಂತದಲ್ಲಿ ಡಿ.22ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ಅದರಂತೆ 209 ಗ್ರಾಪಂ ವ್ಯಾಪ್ತಿಯ ಮತ ಕ್ಷೇತ್ರಗಳಿಗೆ ಜಿಲ್ಲೆ 5290 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ 15 ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದು, ಈ 15 ಗ್ರಾಮ ಪಂಚಾಯತ್‍ಗಳ ಮತ ಕ್ಷೇತ್ರಗಳಿಗೆ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗದಿರುವುದರಿಂದ 209 ಗ್ರಾಮ ಪಂಚಾಯತ್‍ಗಳ ಪೈಕಿ ಡಿ.22ರಂದು 194 ಗ್ರಾಮ ಪಂಚಾಯತ್‍ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.
ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ತರೀಕೆರೆ, ಕಡೂರು, ಅಜ್ಜಂಪುರ, ಶೃಂಗೇರಿ ತಾಲೂಕುಗಳ 194 ಗ್ರಾಮ ಪಂಚಾಯತ್‍ಗಳಿಗೆ ಮಂಗಳವಾರ ಚುನಾವಣೆ ನಡೆಯಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕಳೆದ 15 ದಿನಗಳಿಂದ ಮತ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತ ಭೇಟೆಗಿಳಿದಿದ್ದು, ಭರ್ಜರಿ ಪ್ರಚಾರ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.
ಗ್ರಾಪಂ ಚುನಾವಣೆ ರಾಜಕೀಯ ಪಕ್ಷಗಳ ಚಿನ್ಹೆಗಳಡಿಯಲ್ಲಿ ನಡೆಯುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ವಿಧಾನಸಭೆ, ಲೋಕಸಭಾ ಚುನಾವಣೆಗಳಿಗೆ ದಿಕ್ಸೂಚಿ ಎಂಬುದು ಎಲ್ಲ ರಾಜಕೀಯ ಪಕ್ಷಗಳೂ ನಂಬಿರುವ ಸತ್ಯವೂ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ಬಹುತೇಕ ಗ್ರಾಮ ಪಂಚಾಯತ್‍ಗಳ ಮೇಲೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ, ಸಿಪಿಐ ಪಕ್ಷಗಳು ಕಣ್ಣಿಟ್ಟಿದ್ದು, ಗ್ರಾಮ ಪಂಚಾಯತ್ ಆಡಳಿತದ ಗದ್ದುಗೆಯನ್ನು ತಮ್ಮ ಪಕ್ಷವೇ ಹಿಡಿಯಬೇಕೆಂದು ಪಟ್ಟು ಹಿಡಿದಿರುವುದರಿಂದ ಬಹುತೇಕ ಎಲ್ಲ ಗ್ರಾಪಂ ಮತ ಕ್ಷೇತ್ರಗಳಿಗೆ ವಿವಿಧ ರಾಜಕೀಯ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಗೆ ಸ್ಪಧಿಸಿದ್ದು, ಈ ಅಭ್ಯರ್ಥಿಗಳ ಪರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ, ಸಿಪಿಐ ಪಕ್ಷಗಳ ಜಿಲ್ಲಾ, ತಾಲೂಕು ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದು, ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಕಾಫಿ, ಅಡಿಕೆ, ಭತ್ತದ ಕಟಾವಿನಂತ ಕೃಷಿ ಚಟುವಟಿಕೆ ಭರದಿಂದ ನಡೆಯುತ್ತಿದ್ದು, ಗ್ರಾಮೀಣ ಭಾಗದಲ್ಲಿ ಜನರು ಹಗಲಿನ ವೇಳೆ ಕಾಫಿ ಕೊಯ್ಲು, ಅಡಿಕೆ ಕೊಯ್ಲು, ಭತ್ತದ ಕಟಾವು ಸೇರಿದಂತೆ ಇತರ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪರಿಣಾಮ ಹಗಲಿನ ವೇಳೆ ಬಹುತೇಕ ಜನರು ಜಮೀನುಗಳಲ್ಲಿ ಕೆಲಸದಲ್ಲಿ ನಿರತರಾಗಿರುವುದರಿಂದ ಬಹುತೇಕ ಅಭ್ಯರ್ಥಿಗಳು ಬೆಳಗ್ಗೆ ಮತ್ತು ರಾತ್ರಿ ವೇಳೆ ಮತಬೇಟೆಗೆ ಮುಂದಾಗುತ್ತಿದ್ದಾರೆ. ಇನ್ನು ಕೆಲ ಅಭ್ಯರ್ಥಿಗಳು ಒಬ್ಬೊಬ್ಬರಾಗಿಯೇ ಮತಭೇಟೆ ಮಾಡುತ್ತಿರುವುದು ಜಿಲ್ಲಾದ್ಯಂತ ಕಂಡು ಬರುತ್ತಿದೆ.
ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರಿಂದಲೂ ಪ್ರಚಾರ ಭರಾಟೆ: ಗ್ರಾಪಂ ಚುನಾವಣೆಯನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳ ಮುಖಂಡರು ಪ್ರತಿಷ್ಟೆಯಾಗಿ ತಗೆದುಕೊಂಡಿವೆ. ತಮ್ಮ ಪಕ್ಷದವರನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಲು ತೆರೆಮರೆಯಲ್ಲಿ ಎಲ್ಲ ಪಕ್ಷಗಳ ಮುಖಂಡರೂ ಅಖಾಡಕ್ಕಿಳಿದಿದ್ದಾರೆ.
209 ಗ್ರಾಮ ಪಂಚಾಯತ್ ಗಳ 2139 ಸ್ಥಾನಗಳ ಪೈಕಿ ಈಗಾಗಲೇ 107 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದ್ದು, 1,893 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 5,290 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಗ್ರಾಪಂ ಚುನಾವಣೆ ಎದುರಿಸಲು ಜಿಲ್ಲಾದ್ಯಂತ ಪೂರಕವಾದ ತಯಾರಿ ನಡೆಸಲಾಗಿದೆ. ಪ್ರತೀ ಬೂತ್‍ಮಟ್ಟದಲ್ಲಿ ತಾನೂ ಸೇರಿದಂತೆ ಪಕ್ಷದ ಎಲ್ಲ ನಾಯಕರೂ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದೇವೆ. ಕೆಲ ಗ್ರಾಪಂ ವ್ಯಾಪ್ತಿಯಲ್ಲಿ ಪಕ್ಷ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಅದರಂತೆ ಮತಯಾಚನೆ ಮಾಡಿದ್ದೇವೆ. ಪಕ್ಷ ಸಂಘಟನೆಯನ್ನು ಗ್ರಾಮೀಣ ಭಾಗದಲ್ಲಿ ಗಟ್ಟಿಗೊಳಿಸಲು ಗ್ರಾಪಂ ಚುನಾವಣೆ ಸೂಕ್ತ ವೇದಿಕೆಯಾಗಿದೆ.
-ರಂಜನ್ ಅಜಿತ್‍ಕುಮಾತ್, ಜೆಡಿಎಸ್ ಜಿಲ್ಲಾಧ್ಯಕ್ಷ.
ಜಿಲ್ಲೆಯಲ್ಲಿ ಎಲ್ಲ ಗ್ರಾಪಂ ಚುನಾವಣಾ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸಕ್ರೀಯರಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿ ಆಡಳಿತದ ಫಲ ನಮ್ಮ ಪಕ್ಷಕ್ಕೆ ಹಳ್ಳಿಹಳ್ಳಿಯಲ್ಲೂ ಸಿಗಲಿದೆ. ಪೂರ್ವತಯಾರಿಯಂತೆ ಚುನಾವಣಾ ಪ್ರಚಾರ ನಡೆದಿದೆ. ಪ್ರತಿಬೂತ್‍ಗೆ ಪಂಚರತ್ನ ತಂಡಗಳನ್ನು ರಚಿಸಿ ಮತದಾರರ ಬಳಿ ಮತಯಾಚಿಸಿದ್ದೇವೆ.
- ವರಸಿದ್ದಿ ವೇಣುಗೋಪಾಲ್, ಬಿಜೆಪಿ ಜಿಲ್ಲಾ ವಕ್ತಾರ.
ಪ್ರತೀ ಪಂಚಾಯತ್ ಮಟ್ಟದಲ್ಲಿ ಬ್ಲಾಕ್‍ಮಟ್ಟ, ಜಿಲ್ಲಾಮಟ್ಟ ಹಾಗೂ ಕೆಪಿಸಿಸಿ ನಿರ್ದೇಶನದಂತೆ ಮುಖಂಡರು ಕಾರ್ಯಪ್ರವೃತ್ತರಾಗಿದ್ದಾರೆ. ಬಿಜೆಪಿಯವರನ್ನು ಅಧಿಕಾರದಿಂದ ದೂರ ಇಡಲು ಅಗತ್ಯ ಇರುವಲ್ಲಿ ಹೊಂದಾಣಿಕೆ ರಾಜಕೀಯದ ಕಾರ್ಯತಂತ್ರ ಅನೇಕ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಇದು ಪ್ರತಿಫಲ ನೀಡುವ ವಿಶ್ವಾಸ ಹೆಚ್ಚಿದೆ
- ಡಾ.ಕೆ.ಪಿ.ಅಂಶುಮಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.







