ಇಡೀ ರಾಷ್ಟ್ರವೇ ರೈತರ ಬೆನ್ನಿಗಿದೆ,ನೀವು ಎಷ್ಟು ಜನರ ಮೇಲೆ ಐಟಿ ದಾಳಿ ನಡೆಸುತ್ತೀರಿ?
ಕೇಂದ್ರಕ್ಕೆ ಕೇಜ್ರಿವಾಲ್ ಪ್ರಶ್ನೆ

ಹೊಸದಿಲ್ಲಿ,ಡಿ.20: ಆದಾಯ ತೆರಿಗೆ ದಾಳಿಗಳು ಮತ್ತು ನೋಟಿಸ್‌ಗಳ ಮೂಲಕ ಪಂಜಾಬಿನ ಕೃಷಿ ಉತ್ಪನ್ನಗಳ ಕಮಿಷನ್ ಏಜೆಂಟ್‌ಗಳನ್ನು ಗುರಿಯಾಗಿಸಿರುವುದಕ್ಕಾಗಿ ಕೇಂದ್ರ ಸರಕಾರವನ್ನು ರವಿವಾರ ತೀವ್ರ ತರಾಟೆಗೆತ್ತಿಕೊಂಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು,ಸರಕಾರವು ರೈತರ ಪ್ರತಿಭಟನೆಯನ್ನು ದುರ್ಬಲಗೊಳಿಸಲು ಇಂತಹ ಬಲವಂತದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.
ಮಾಧ್ಯಮ ವರದಿಗಳಂತೆ ಕಳೆದ ಹಲವಾರು ದಿನಗಳಿಂದ ಅರ್ಹತಿಯಾಗಳೆಂದು ಕರೆಯಲಾಗುವ ಪಂಜಾಬಿನ ಕೃಷಿ ಉತ್ಪನ್ನಗಳ ಕಮಿಷನ್ ಏಜೆಂಟ್‌ಗಳಿಗೆ ಆದಾಯ ತೆರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಲಾಗುತ್ತಿದೆ. ಇಲಾಖೆಯು ಅಲ್ಪಾವಧಿಯ ನೋಟಿಸ್‌ಗಳನ್ನು ನೀಡಿ ಹಲವರ ಮೇಲೆ ದಾಳಿಗಳನ್ನು ನಡೆಸುತ್ತಿದೆ. ಈ ಏಜೆಂಟ್‌ಗಳು ನೂತನ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗಿದೆ.
ರೈತರ ಹೋರಾಟವನ್ನು ಬೆಂಬಲಿಸುತ್ತಿರುವ ಪಂಜಾಬಿನ ವ್ಯಾಪಾರಿಗಳ ವಿರುದ್ಧ ಕೇಂದ್ರವು ದಾಳಿಗಳನ್ನು ನಡೆಸುತ್ತಿದೆ. ಈ ರೀತಿಯಲ್ಲಿ ವ್ಯಾಪಾರಿಗಳಿಗೆ ಕಿರುಕುಳ ನೀಡುವುದು ಸರಿಯಲ್ಲ. ರೈತರ ಆಂದೋಲನವನ್ನು ದುರ್ಬಲಗೊಳಿಸಲು ಇದನ್ನು ಮಾಡಲಾಗುತ್ತಿದೆ ಎಂದು ಟ್ವೀಟಿಸಿರುವ ಕೇಜ್ರಿವಾಲ್,ಇಂದು ಇಡೀ ದೇಶವೇ ರೈತರ ಬೆಂಬಲಕ್ಕಿದೆ. ಕೇಂದ್ರ ಸರಕಾರವು ಯಾರ್ಯಾರ ಮೇಲೆ ದಾಳಿ ನಡೆಸುತ್ತದೆ ಎಂದು ಪ್ರಶ್ನಿಸಿದ್ದಾರೆ.





