ಈ ದೇಶದ ಸಂಸ್ಕೃತಿ, ಭಾಷೆ, ಸಮಾಜದ ಅಭಿವೃದ್ಧಿಗೆ ಮುಸ್ಲಿಮರು ನೀಡಿರುವ ಕೊಡುಗೆ ಬಹಳಷ್ಟಿದೆ: ಡಾ. ಮುಜಾಫರ್ ಅಸಾದಿ
ವಿಚಾರ ಸಂಕಿರಣ, ಸೂಫಿ ಮತ್ತು ವಚನ ಗಾಯನ ಕಾರ್ಯಕ್ರಮ

ಮೈಸೂರು,ಡಿ.20: ಈ ದೇಶದ ಸಂಸ್ಕೃತಿ, ಭಾಷೆ, ಆಹಾರ ಪದ್ಧತಿ, ಸಮಾಜದ ಅಭಿವೃದ್ಧಿಗೆ ಮುಸ್ಲಿಮರು ನೀಡಿರುವ ಕೊಡುಗೆ ಬಹಳಷ್ಟಿದೆ. ಅದೇ ವೇಳೆ ಅಲ್ಪಸಂಖ್ಯಾತರು ದೊಡ್ಡ ಶಕ್ತಿಯಾಗಿ ಬೆಳೆಯುವುದು ಬೇಡ ಎಂದು ಕೆಲವರು ಬಯಸುತ್ತಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮುಜಾಫರ್ ಅಸಾದಿ ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಅಂತರ್ ರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆ ಅಂಗವಾಗಿ ರವಿವಾರ ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ಸೂಫಿ ಮತ್ತು ವಚನ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರು ಬೇಕೋ ಅಥವಾ ಬೇಡವೋ ಎಂಬ ಸಂದಿಗ್ಧ ಸ್ಥಿತಿ ಈಗ ಎದುರಾಗಿದೆ. ಆದರೆ ಈ ದೇಶಕ್ಕೆ ಅವರು ನೀಡಿರುವ ಕೊಡುಗೆಯನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ದೇಶದ ಸಂಸ್ಕೃತಿ, ಭಾಷೆ, ಆಹಾರ ಪದ್ಧತಿ, ಸಮಾಜದ ಅಭಿವೃದ್ಧಿಗೆ ಮುಸ್ಲಿಮರು ನೀಡಿರುವ ಕೊಡುಗೆ ಬಹಳಷ್ಟಿದೆ. ಅದೇ ವೇಳೆ ಅಲ್ಪಸಂಖ್ಯಾತರು ದೊಡ್ಡ ಶಕ್ತಿಯಾಗಿ ಬೆಳೆಯುವುದು ಬೇಡ ಎಂದು ಕೆಲವರು ಬಯಸುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಸಮುದಾಯವೊಂದರ ಬೆಳವಣಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮುಸ್ಲಿಮರಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಮಾನವಾಗಿ ಪಾಲ್ಗೊಳ್ಳಲು ಅವಕಾಶ ನೀಡಬೇಕು, ಭಾರತದ ಇತರ ಪ್ರಜೆಗಳ ಜತೆ ಸಮಾನವಾಗಿ ಕಾಣಬೇಕು ಎಂದರು.
1919ರ ಲೆಸ್ಲಿ ಮಿಲ್ಲರ್ ವರದಿಯು ಮುಸ್ಲಿಮರು ಅತ್ಯಂತ ಹಿಂದುಳಿದ ಸಮುದಾಯದವರು ಎಂದು ಹೇಳಿದ್ದರೆ, 1997ರ ರೆಹಮಾನ್ ಖಾನ್ ಸಮಿತಿ ಕೂಡಾ ಇದೇ ಅಂಶವನ್ನು ಹೇಳಿದೆ. ಆದ್ದರಿಂದ ಹಲವು ದಶಕಗಳು ಕಳೆದರೂ ಸಮುದಾಯದ ಅಭಿವೃದ್ದಿ ಆಗಿಲ್ಲ. ಅವರ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸೂಫಿ ಚಳವಳಿಯು ಹಿಂದೂ-ಮುಸ್ಲಿಂ ನಡುವೆ ಸಮನ್ವಯ ಸಂಸ್ಕೃತಿಯನ್ನು ಹುಟ್ಟುಹಾಕಿ ಕೋಮುವಾದ ಹರಡದಂತೆ ತಡೆಯೊಡ್ಡಿತ್ತು. ಆದರೆ, 1980ರ ಬಳಿಕ ದೇಶದಲ್ಲಿ ಕೋಮುವಾದ ನಿಧಾನವಾಗಿ ಬೆಳೆಯಿತು. ಸಮನ್ವಯ ಸಂಸ್ಕೃತಿಯನ್ನು ಕೊಟ್ಟಿರುವ ಸೂಫಿಸಂ ಅನ್ನು ವಾಪಸ್ ಪಡೆಯಬೇಕಿದೆ ಎಂದರು.
ಕೆ.ಬಸವರಾಜ್ ಮಾತನಾಡಿ, ಭಾಷೆ ಮತ್ತು ಧರ್ಮದ ಕಾರಣದಿಂದ ಅಲ್ಪಸಂಖ್ಯಾತರು ಎಲ್ಲೆಡೆಯೂ ಕಿರುಕುಳ ಅನುಭವಿಸುತ್ತಾ ಬಂದಿದ್ದಾರೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಬಹುಸಂಖ್ಯಾತರಿಗೆ ತಿಳಿಸಿಕೊಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಜಂಟಿ ನಿರ್ದೇಶಕ ಆರ್.ಮಹದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಚಿಂತಕ ಡಾ.ವಿ.ಲಕ್ಷ್ಮಿನಾರಾಯಣ, ಎನ್.ವಿಜಯಕುಮಾರ್, ಅಂಬಯ್ಯ ನುಲಿ ಮತ್ತು ರಾಮಚಂದ್ರ ಹಡಪದ ಅವರು ಸೂಫಿ ಮತ್ತು ವಚನಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
'ಎಲ್ಲ ಮುಸ್ಲಿಮರು ಗೋಮಾಂಸ ತಿನ್ನಲ್ಲ'
ಮುಸ್ಲಿಮರೆಲ್ಲರೂ ಗೋಮಾಂಸ ತಿನ್ನುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅದು ಶುದ್ಧ ಸುಳ್ಳು. ಇವರಲ್ಲಿ ಶೇ. 49 ರಷ್ಟು ಮಂದಿ ಗೋಮಾಂಸ ತಿನ್ನಲ್ಲ ಎಂದು ಪ್ರೊ.ಮುಜಾಫರ್ ಅಸಾದಿ ಹೇಳಿದರು.
ಉರ್ದು ಮುಸ್ಲಿಮರ ಭಾಷೆ ಎಂದು ಹೇಳಲಾಗುತ್ತದೆ. ಆದರೆ ಶೇ 50ರಷ್ಟು ಜನರಿಗೆ ಇದು ಮಾತೃಭಾಷೆಯಲ್ಲ. ಈ ಎರಡು ಅಂಶಗಳು ಸಾಚಾರ್ ವರದಿಯಲ್ಲಿ ಉಲ್ಲೇಖವಾಗಿದೆ. ಆದರೂ ಉದ್ದೇಶಪೂರ್ವಕವಾಗಿ ಮರೆಮಾಚಿ ಸಮುದಾಯದ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತದೆ ಎಂದರು.







