ಸಿದ್ದರಾಮಯ್ಯರನ್ನು ಟೀಕಿಸುವವರು ಕನ್ನಡಿ ಮುಂದೆ ನಿಂತು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳಲಿ: ರಮೇಶ್ ಬಾಬು
ಬೆಂಗಳೂರು, ಡಿ. 20: 'ಇತಿಹಾಸ ಮರೆಮಾಚಲು ಯಾರಿಗೂ ಸಾಧ್ಯವಿಲ್ಲ. ಅವಕಾಶವಾದ ರಾಜಕಾರಣ ಮಾಡುವರು ಒಳ ಒಪ್ಪಂದ ಹಿಂದೆಯೂ ಮಾಡಿದ್ದಾರೆ, ಇಂದೂ ಮಾಡುತ್ತಾರೆ, ಮುಂದೆಯೂ ಮಾಡುತ್ತಾರೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನಾಯಕರು ಕನ್ನಡಿಯ ಮುಂದೆ ನಿಂತು ಅವರ ಆತ್ಮಸಾಕ್ಷಿಯನ್ನು ಒಮ್ಮೆ ಪ್ರಶ್ನೆ ಮಾಡಿಕೊಳ್ಳಲಿ' ಎಂದು ಕಾಂಗ್ರೆಸ್ ವಕ್ತಾರ ರಮೇಶ್‍ಬಾಬು ಇಂದಿಲ್ಲಿ ಸಲಹೆ ಮಾಡಿದ್ದಾರೆ.
ರವಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಗ್ರಾ.ಪಂ.ಚುನಾವಣಾ ಪ್ರಚಾರ ಸಮಯದ ಹೇಳಿಕೆಯನ್ನು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಟೀಕಿಸುವ ಮೂಲಕ ತಮ್ಮ ರಾಜಕೀಯದ ಅಸ್ತಿತ್ವಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಮಾಜಿ ಸಚಿವ ಗುಬ್ಬಿ ಶಾಸಕ ಶ್ರೀನಿವಾಸ್ ಬಿಜೆಪಿ ಜೆಡಿಎಸ್ ಒಳಒಪ್ಪಂದ ವಾಸ್ತವ ಎಂದು ಸತ್ಯ ಹೇಳಿದ್ದಾರೆ.
ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಎಚ್‍ಡಿಕೆ ವಿರುದ್ಧ ಮುನಿಸಿಕೊಂಡು ವಿಧಾನ ಪರಿಷತ್ತಿನಲ್ಲಿ ಪ್ರತ್ಯೇಕ ಗುಂಪು ಮಾಡಿ ಜೆಡಿಎಸ್ ಒಡೆಯಲು ಪ್ರಯತ್ನಿಸಿದ ಹೊರಟ್ಟಿಗೆ ರಾಜಕೀಯ ವಿಶ್ರಾಂತಿ ಪಡೆಯಲು ಗೌಡರಿಗೆ ಸಲಹೆ ನೀಡಿದ್ದಾರೆ. 2017ರಲ್ಲಿ 37 ಸ್ಥಾನ ಪಡೆದ ಜೆಡಿಎಸ್ ಸಿಎಂ ಸ್ಥಾನದ ಬದಲು ಡಿಸಿಎಂ ಸ್ಥಾನ ಪಡೆದು ಸಮ್ಮಿಶ್ರ ಸರಕಾರ ರಚನೆ ಆಗಿದ್ದರೆ ಐದು ವರ್ಷ ಪೂರೈಸಬಹುದಿತ್ತು. ಈ ನಿಟ್ಟಿನಲ್ಲಿ ಪಕ್ಷದೊಳಗೆ ಅಥವಾ ಶಾಸಕರೊಂದಿಗೆ ಚರ್ಚೆಗೆ ಅಂದು ಅವಕಾಶ ನೀಡಲೇ ಇಲ್ಲ. ಸಿಎಂ ಆಗಿ ಜೆಡಿಎಸ್ ಶಾಸಕರನ್ನೇ ಇಡಿದಿಟ್ಟುಕೊಳ್ಳದ ಎಚ್‍ಡಿಕೆ ಕಾಂಗ್ರೆಸ್ ಪಕ್ಷ ಟೀಕಿಸುವ ನೈತಿಕ ಶಕ್ತಿ ಕಳೆದುಕೊಂಡಿದ್ದಾರೆ ಎಂದು ರಮೇಶ್ ಬಾಬು ತಿರುಗೇಟು ನೀಡಿದ್ದಾರೆ.
ಒಬ್ಬ ಮುಖ್ಯಮಂತ್ರಿ ಹೋಟೆಲ್ ವಾಸ್ತವ್ಯ ರಾಜ್ಯದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿದ್ದು, ಶಾಸಕರೇ ಅವರನ್ನು ಭೇಟಿಯಾಗಲು ಆಗಲಿಲ್ಲ. ಧಣಿದ ಸಿಎಂಗೆ ವಿಶ್ರಾಂತಿ ಪಡೆಯಲು ಕುಮಾರ ಕೃಪ ಅತಿಥಿ ಗೃಹದ ಜೊತೆಗೆ ಹತ್ತಾರು ಸರಕಾರಿ ಅತಿಥಿ ಗೃಹ ಇರುವಾಗ ದಾರಿತಪ್ಪಿಸುವರ ಮಾತು ಕೇಳಿ ಖಾಸಗಿ ದರ್ಬಾರು ಮಾಡಲು ಹೋಟೆಲ್ ಸೇರಿದ್ದು ಸುಳ್ಳೇ? ಎಂದು ಅವರು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಪ್ರಾದೇಶಿಕ ಪಕ್ಷ ಮಾಡಲು ಸವಾಲು ಹಾಕಿದ್ದಾರೆ. ಜೆಡಿಎಸ್ ಪಕ್ಷ ಜನತಾ ಪಕ್ಷದ ಪಳಯುಳಿಕೆ ಆಗಿದ್ದು ಕರ್ನಾಟಕದಲ್ಲಿ ಮೂಲ ಕಾರ್ಯಕರ್ತರ ಕಾರಣಕ್ಕಾಗಿ ಉಳಿದುಕೊಂಡಿದೆ. ಎಚ್‍ಡಿಕೆ ಅವರಿಗೆ ಪ್ರಾದೇಶಿಕ ಪಕ್ಷದ ಮೇಲೆ ನಿಜವಾದ ಪ್ರೀತಿ ಇದ್ದರೆ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕುವ ಬದಲು 1989ರಲ್ಲಿ ದೇವೇಗೌಡರು ಕಟ್ಟಿದ ಪ್ರಾದೇಶಿಕ ಪಕ್ಷ ಸಮಾಜವಾದಿ ಜನತಾ ಪಕ್ಷವನ್ನು ಕಟ್ಟಿ ತಮ್ಮ ಶಕ್ತಿ ತೋರಿಸಲಿ. ಬೇಕಿದ್ದರೆ ವೈಎಸ್‍ವಿ ದತ್ತ ಮಾರ್ಗದರ್ಶನ, ಸಲಹೆ ನೀಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಚಾಮುಂಡೇಶ್ವರಿ, ವರುಣ ಮತ್ತು ಬಾದಾಮಿ ಮೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಹಳಿಯಲು ಬಿಜೆಪಿ ಜೊತೆ ಹೊಂದಾಣಿಕೆ ಆಗಿದ್ದ ಸತ್ಯ ಮುಚ್ಚಿಡುವುದು ಏಕೆ? ಚುನಾವಣೆ ನಂತರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರನ್ನು ಹಣಿಯಲು ಪ್ರಯತ್ನ ಮಾಡಲಿಲ್ಲವೇ? ಅವರಿಗೆ ಒಂದು ಒಳ್ಳೆಯ ಖಾತೆಯನ್ನು ನೀಡದೆ ಅವಮಾನಿಸಲಿಲ್ಲವೇ? ಎಂದು ರಮೇಶ್‍ಬಾಬು ಕೇಳಿದ್ದಾರೆ.
'ಒಳ ಒಪ್ಪಂದದ ಬಗ್ಗೆ ಬೇರೆ ಪಕ್ಷಕ್ಕೆ ಬೆರಳು ತೋರಿಸುವ ಮೊದಲು ಜೆಡಿಎಸ್ ಆತ್ಮಾವಲೋಕನ ಮಾಡಿಕೊಳ್ಳಲಿ. ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಮಲ್ಲೇಶ್ವರಂ ಕ್ಷೇತ್ರದಲ್ಲಿ ಇಂದಿನ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಹೇಳಿದವರಿಗೆ ಜೆಡಿಎಸ್ 'ಬಿ' ಫಾರಂ ನೀಡಿದ್ದು ಸುಳ್ಳೇ? ಇಂತಹ ಹತ್ತಾರು ಒಳಒಪ್ಪಂದಗಳು ನೆಡೆದಿಲ್ಲವೇ?'
-ರಮೇಶ್‍ಬಾಬು, ಕಾಂಗ್ರೆಸ್ ವಕ್ತಾರ







