ಏಐಕೆಎಸ್ ನೇತೃತ್ವದಲ್ಲಿ ಸೋಮವಾರ ಮಹಾರಾಷ್ಟ್ರದಿಂದ ದಿಲ್ಲಿಗೆ ರೈತರ ಬೃಹತ್ ವಾಹನ ಜಾಥಾ
ಸಾಂದರ್ಭಿಕ ಚಿತ್ರ
ನಾಶಿಕ್,ಡಿ.20: ಅಖಿಲ ಭಾರತ ಕಿಸಾನ ಸಭಾ (ಏಐಕೆಎಸ್) ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಇಲ್ಲಿಯ ಗಾಲ್ಫ್ ಮೈದಾನದಲ್ಲಿ ಸಮಾವೇಶಗೊಳ್ಳಲಿರುವ ಮಹಾರಾಷ್ಟ್ರದ 21 ಜಿಲ್ಲೆಗಳ ಸಾವಿರಾರು ರೈತರು ದಿಲ್ಲಿಗೆ ತಮ್ಮ ವಾಹನ ಜಾಥಾವನ್ನು ಆರಂಭಿಸಲಿದ್ದಾರೆ.
ಜಾಥಾದ ನೇತೃತ್ವವನ್ನು ಡಾ.ಅಶೋಕ ಧಾವಳೆ,ಜೆ.ಪಿ.ಗಾವಿತ್ ಸೇರಿದಂತೆ ಏಐಕೆಎಸ್ ನಾಯಕರು ವಹಿಸಲಿದ್ದು,ಜಾಥಾಕ್ಕೆ ಮುನ್ನ ಬಹಿರಂಗ ಸಭೆಯಲ್ಲಿ ಕೇರಳದ ರಾಜ್ಯಸಭಾ ಸದಸ್ಯ ಹಾಗೂ ಏಐಕೆಎಸ್ ಜಂಟಿ ಕಾರ್ಯದರ್ಶಿ ಕೆ.ಕೆ.ರಾಗೇಶ ಅವರು ಮಾತನಾಡಲಿದ್ದಾರೆ. ಹಲವಾರು ಸಿಪಿಎಂ ಧುರೀಣರೂ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಕೃಷಿ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿ ಮತ್ತು ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ರಾಗೇಶ್ ಅವರು 2018ರಲ್ಲಿ ಸಂಸತ್ತಿನಲ್ಲಿ ಎರಡು ಮಸೂದೆಗಳನ್ನು ಮಂಡಿಸಿದ್ದರು. ನೂತನ ಕೃಷಿ ಕಾನೂನುಗಳನ್ನೂ ಅವರು ರಾಜ್ಯಸಭೆಯಲ್ಲಿ ಬಲವಾಗಿ ವಿರೋಧಿಸಿದ್ದರು.
ಛತ್ರಪತಿ ಶಿವಾಜಿ ಮಹಾರಾಜ,ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಗೌರವಾರ್ಪಣೆಯ ಬಳಿಕ ರಿಲಯನ್ಸ್ ಪೆಟ್ರೋಲ್ ಪಂಪ್ನೆದುರು ಪ್ರತಿಭಟನೆಯನ್ನು ನಡೆಸಲಿರುವ ರೈತರು ನಂತರ ದಿಲ್ಲಿಗೆ ತಮ್ಮ ವಾಹನ ಜಾಥಾವನ್ನು ಮುನ್ನಡೆಸಲಿದ್ದಾರೆ. ಜಾಥಾ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳ ಮೂಲಕ ದಿಲ್ಲಿಯನ್ನು ತಲುಪಲಿದೆ.
ಮೂರು ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು, ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂದೆಗೆದುಕೊಳ್ಳಬೇಕು, ಎಂಎಸ್ಪಿಗೆ ಕಾನೂನು ರಕ್ಷಣೆಯನ್ನು ಒದಗಿಸಬೇಕು ಮತ್ತು ಆ ಬೆಲೆಗಳಲ್ಲಿ ಸಾರ್ವತ್ರಿಕ ಖರೀದಿಯನ್ನು ಖಚಿತಪಡಿಸಬೇಕು ಹಾಗೂ ಆಹಾರ ಭದ್ರತೆ ಮತ್ತು ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು ಬಲಗೊಳಿಸಬೇಕು ಇವು ಮಹಾರಾಷ್ಟ್ರದ ರೈತರ ವಾಹನ ಜಾಥಾ ಆಂದೋಲನದ ಮುಖ್ಯ ಬೇಡಿಕೆಗಳಾಗಿದ್ದು, ಐತಿಹಾಸಿಕ ರಾಷ್ಟ್ರವ್ಯಾಪಿ ರೈತರ ಪ್ರತಿಭಟನೆಯನ್ನು ಇನ್ನಷ್ಟು ಬಲಗೊಳಿಸುವ ಉದ್ದೇಶವನ್ನು ಹೊಂದಿದೆ.