ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸದ ಸರಕಾರ: ಉ-ಕ ಭಾಗದ ಸಮಸ್ಯೆಗಳಿಗೆ ಸಿಗದ ಪರಿಹಾರ
ಬೆಳಗಾವಿ, ಡಿ.20: ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಹಾಗೂ ಜನರ ಆಶೋತ್ತರಗಳನ್ನು ಚರ್ಚಿಸಲು ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣವಾಗಿದೆ. ಆದರೆ, ಪ್ರವಾಹ ಹಾಗೂ ಕೊರೋನ ನೆಪ ಹೇಳಿ ಕಳೆದೆರಡು ವರ್ಷಗಳಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗಿಲ್ಲ. ವಿನಾಕಾರಣ ಸುವರ್ಣಸೌಧ ನಿರ್ವಹಣೆಗೆ ಪ್ರತಿವರ್ಷ ಕೋಟ್ಯಂತರ ಹಣ ವ್ಯಯಿಸಲಾಗುತ್ತಿದೆ. ಆದರೆ, ಸುವರ್ಣಸೌಧದ ಬಗ್ಗೆ ಉ-ಕ ಭಾಗದ ಜನರು ಕಂಡಿದ್ದ ಕನಸು ಮಾತ್ರ ಸಾಕಾರಗೊಳ್ಳುತ್ತಿಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪನವರು ತಮ್ಮ ಕನಸಿನ ಕೂಸಿನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ತಾವು ಸಿಎಂ ತಕ್ಷಣವೇ ಸುವರ್ಣಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡುತ್ತೇನೆ ಎಂದು ಚುನಾವಣೆ ಪೂರ್ವ ಯಡಿಯೂರಪ್ಪನವರು ಭರವಸೆ ನೀಡಿದ್ದರು. ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳೇ ಕಳೆದಿವೆ. ಆದರೆ, ಈವರೆಗೆ ಮಾಹಿತಿ ಆಯೋಗ ಕಚೇರಿ ಹೊರತುಪಡಿಸಿದರೆ, ಇನ್ಯಾವ ಕಚೇರಿಗಳ ಸ್ಥಳಾಂತರವಾಗಿಲ್ಲ.
ಉ-ಕ ಭಾಗದ ಅಭಿವೃದ್ಧಿಗೆ ಪೂರಕವಾದ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸುವಂತೆ ಈ ಭಾಗದ ಮಠಾಧೀಶರು, ಕನ್ನಡ ಸಂಘಟನೆಗಳು ಹೋರಾಟ ಮಾಡುತ್ತಿವೆ. ಹೋರಾಟಗಾರರ ಬೇಡಿಕೆ ಈಡೇರಿಸಬೇಕಿದ್ದ ಸರಕಾರ ಮೌನಕ್ಕೆ ಜಾರಿದ್ದು, ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸುವರ್ಣಸೌಧವನ್ನು ಕ್ರಿಯಾಶೀಲವಾಗಿಡಬೇಕು ಎಂಬುವುದು ಈ ಭಾಗದ ಜನರ ಒತ್ತಾಯ. ಆದರೆ, ಕಚೇರಿಗಳ ಸ್ಥಳಾಂತರಕ್ಕೂ ಸರಕಾರ ಮನಸ್ಸು ಮಾಡುತ್ತಿಲ್ಲ. ಇಲ್ಲದ ನೆಪ ಹೇಳಿ ಅಧಿವೇಶನವನ್ನೂ ಇಲ್ಲಿ ನಡೆಸಲಾಗುತ್ತಿಲ್ಲ.
ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡಬೇಕು ಎಂದು ಈ ಭಾಗದ ಜನರು ಬೇಡಿಕೆ ಇಡುತ್ತಿದ್ದಾರೆ. ಆದರೆ, ಜಿಲ್ಲಾಮಟ್ಟದ ಕಚೇರಿಗಳನ್ನು ಸೌಧಕ್ಕೆ ಶಿಫ್ಟ್ ಮಾಡುವ ಮೂಲಕ ಸೌಧವನ್ನು ಜಿಲ್ಲಾಭವನ ಪಟ್ಟ ಕಟ್ಟಲು ಹೊರಟಿದೆ. ನಗರ ಪ್ರದೇಶದಿಂದ 10 ಕಿ.ಮೀ ದೂರದಲ್ಲಿರುವ ಸುವರ್ಣಸೌಧಕ್ಕೆ ಈವರೆಗೆ 23 ಜಿಲ್ಲಾಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ.
ಬೆಳಗಾವಿಯ ಜಿಲ್ಲೆಯ ಸಚಿವರು, ಜಿಲ್ಲಾ ನಾಯಕರು ಸುವರ್ಣಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸುವ ಬಗ್ಗೆ ಒಂದು ಮಾತನ್ನೂ ಆಡುತ್ತಿಲ್ಲ. ಜಿಲ್ಲೆಯಲ್ಲಿ ಡಿಸಿಎಂ ಸೇರಿ ನಾಲ್ವರು ಸಚಿವರಿದ್ದಾರೆ. ಇಷ್ಟೆಲ್ಲ ಪ್ರಾತಿನಿಧ್ಯ ಸಿಕ್ಕಿದ್ದರೂ ಜಿಲ್ಲೆಗೆ ಲಾಭವಾಗದೇ ಇರುವುದು ಈ ಭಾಗದ ಜನರ ನಿರಾಸೆಗೆ ಕಾರಣವಾಗಿದೆ.







