ದೇಹಕ್ಕೆ ಆಹಾರ ಕ್ರಮ, ವ್ಯಾಯಾಮ ಮುಖ್ಯ: ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ
“ಫಿಟ್ ಇಂಡಿಯಾ ಸೈಕ್ಲಥಾನ್”

ಬೆಂಗಳೂರು, ಡಿ. 20: ಮನುಷ್ಯನ ದೈಹಿಕ ಆರೋಗ್ಯಕ್ಕಾಗಿ ಆಹಾರ ಕ್ರಮ, ವ್ಯಾಯಾಮದಂತಹ ಚಟುವಟಿಕೆಗಳೂ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅಭಿಪ್ರಾಯಪಟ್ಟರು.
ರವಿವಾರ ನಗರದ ಕಬ್ಬನ್ ಪಾರ್ಕ್‍ನಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ, ಪಾಲಿಕೆ ವತಿಯಿಂದ ಏರ್ಪಡಿಸಿದ್ದ “ಫಿಟ್ ಇಂಡಿಯಾ ಸೈಕ್ಲಥಾನ್”ಗೆ ಚಾಲನೆ ನೀಡಿ ಮಾತನಾಡಿದ ಅವರು, ನಿಯಮಿತ ವ್ಯಾಯಾಮದಿಂದ ದೈಹಿಕ ಕಾರ್ಯವ್ಯವಸ್ಥೆಗಳನ್ನು ಸುಧಾರಿಸಬಹುದು. ಅದರಲ್ಲೂ ಈ ಕೊರೋನ ಸಮಯದಲ್ಲಿ ಮನೆಯೊಳಗೆ ಹೆಚ್ಚು ಕುಳಿತಿರುವ ದೇಹಕ್ಕೆ ವ್ಯಾಯಾಮದ ಅಗತ್ಯ ಹೆಚ್ಚಿದೆ ಎಂದರು.
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾತನಾಡಿ, ಪ್ರಧಾನಮಂತ್ರಿಗಳ ಕನಸಾಗಿರುವ ಪಿಟ್ ಇಂಡಿಯಾನ ಅಭಿಯಾನದ ಅಂಗವಾಗಿ ಸೈಕ್ಲಥಾನ್ ಆಯೋಜನೆ ಮಾಡಲಾಗಿದೆ. ಪ್ರತಿಯೊಬ್ಬ ನಾಗರಿಕರೂ ಆರೋಗ್ಯವಾಗಿ, ದೈಹಿಕವಾಗಿ ಸದೃಢವಾಗಿರಬೇಕಾದರೆ ಪ್ರತಿನಿತ್ಯ ದೈಹಿಕ ಶಿಕ್ಷಣ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಎಲ್ಲರೂ ಫಿಟ್ ಆಗಿರುವ ಮೂಲಕ ಆರೋಗ್ಯಕರವಾಗಿರಬೇಕು ಎಂದರು.
ಸೈಕ್ಲಥಾನ್ ವೇಳೆ ಫಿಟ್ ಇಂಡಿಯಾ ಅಂಗವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿಯು ಕೋವಿಡ್-19 ವಾರಿಯರ್ಸ್‍ಗಳಾಗಿ ಕಾರ್ಯ ನಿರ್ವಹಿಸುವ ವೈದ್ಯರು, ಸಂಚಾರಿ ವಿಭಾಗದ ಪೊಲೀಸರು ಹಾಗೂ ಮಾರ್ಷಲ್‍ಗಳನ್ನು ಗುರುತಿಸಿ 2 ಸಾವಿರ ರೂ. ಪ್ರೋತ್ಸಾಹ ಗೌರವ ಮೊತ್ತ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಪಾಲಿಕೆಯ ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ, ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ, ಸಂಚಾರ ವಿಭಾಗದ ಡಿಸಿಪಿ ನಾರಾಯಣ್ ಸೇರಿದಂತೆ ಪ್ರಮುಖರಿದ್ದರು.






.jpg)
.jpg)

