ವಿದೇಶಿ ದೇಣಿಗೆಯ ಹೆಸರಿನಲ್ಲಿ ಕೇಂದ್ರದಿಂದ ರೈತ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆ
ಭಾರತೀಯ ಕಿಸಾನ್ ಯೂನಿಯನ್

ಚಂಡೀಗಢ, ಡಿ.20: ತನ್ನ ನೋಂದಣಿ ವಿವರವನ್ನು ಸಲ್ಲಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ. ಈ ಮೂಲಕ ತನಗೆ ವಿದೇಶಿ ದೇಣಿಗೆ ಸಲ್ಲಿಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುವ ಪ್ರಯತ್ನ ನಡೆಸಿದೆ ಎಂದು ಪಂಜಾಬ್‌ನ ಪ್ರಭಾವೀ ರೈತ ಸಂಘಟನೆ ಭಾರತೀಯ ಕಿಸಾನ್ ಯೂನಿಯನ್ (ಏಕತಾ ಉಗ್ರಹಣ್) ಹೇಳಿದೆ.
ಕೃಷಿ ಕಾಯ್ದೆಯನ್ನು ವಿರೋಧಿಸಿ ದಿಲ್ಲಿ ಗಡಿಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೈಜೋಡಿಸಿರುವ ಸಂಘಟನೆಗಳ ವಿರುದ್ಧ ಕೇಂದ್ರ ಸರಕಾರ ಬಲಪ್ರಯೋಗದ ಸಹಿತ ಎಲ್ಲಾ ತಂತ್ರಗಳನ್ನೂ ನಡೆಸುತ್ತಿದೆ. ಇದೀಗ ವಿದೇಶಿ ದೇಣಿಗೆಯ ಹೆಸರಿನಲ್ಲಿ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಅಧ್ಯಕ್ಷ ಜೋಗಿಂದರ್ ಉಗ್ರಹಣ್ ಮತ್ತು ಪ್ರಧಾನ ಕಾರ್ಯದರ್ಶಿ ಸುಖ್‌ದೇವ್ ಸಿಂಗ್ ಆರೋಪಿಸಿದ್ದಾರೆ.
ವಿದೇಶಿ ದೇಣಿಗೆ ಸಂಗ್ರಹಿಸುವ ಸಂಸ್ಥೆಗಳು ಕಡ್ಡಾಯವಾಗಿ ನೋಂದಾವಣೆ ಮಾಡಿಕೊಳ್ಳಬೇಕು ಎಂದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಸೂಚಿಸಿದೆ.
ಕೇಂದ್ರ ಸರಕಾರದ ವಿದೇಶಿ ವಿನಿಮಯ ಇಲಾಖೆಯಿಂದ ನಮಗೆ ಇ-ಮೇಲ್ ಸಂದೇಶ ಬಂದಿದೆ. ಪಂಜಾಬ್‌ನ ಬ್ಯಾಂಕ್‌ನ ಮೂಲಕ ನಮಗೆ ರವಾನೆಯಾಗಿರುವ ಇ-ಮೇಲ್‌ನ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. ಕೇಂದ್ರ ಸರಕಾರ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ವ ಪ್ರಯತ್ನ ನಡೆಸುತ್ತಿದೆ. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಕಮಿಷನ್ ಏಜೆಂಟರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಈಗ ಅವರು ನಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ. ಪಂಜಾಬ್‌ನ ಅನಿವಾಸಿ ಭಾರತೀಯರು ತಾವು ಕಷ್ಟಪಟ್ಟು ದುಡಿದ ಹಣದಿಂದ ನಮಗೆ ದೇಣಿಗೆ ಕಳಿಸುತ್ತಿದ್ದಾರೆ. ಅವರು ನಮ್ಮ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದಾರೆ. ಇದರಿಂದ ಯಾವುದೇ ಸಮಸ್ಯೆಯಾಗಿದೆಯೇ? ಆದರೆ ಕೇಂದ್ರ ಸರಕಾರ ಪ್ರತಿಭಟನೆಯನ್ನು ಹತ್ತಿಕ್ಕುವ ಏಕೈಕ ಗುರಿಯೊಂದಿಗೆ ನಮ್ಮನ್ನು ಗುರಿಯಾಗಿಸಿ ನೋಟಿಸ್ ಕಳುಹಿಸಿದೆ ಎಂದು ಸುಖ್‌ದೇವ್ ಸಿಂಗ್ ಹೇಳಿದ್ದಾರೆ.







