ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಮೂವರು ಕೈದಿಗಳ ಮೇಲೆ ಹಲ್ಲೆ ನಡೆಸಿದ ಸಹ ಕೈದಿ

ಶಿವಮೊಗ್ಗ, ಡಿ.20: ನ್ಯಾಯಾಧೀಶರನ್ನು ನಿಂಧಿಸಿ ಜೈಲು ಪಾಲಾದ ಆರೋಪಿ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡಿಕೊಂಡು ಜಗಳ ಬಿಡಿಸಲು ಬಂದ ಮೂವರು ಕೈದಿಗಳಿಗೆ ನೀರಿನ ಲೋಟದಿಂದ ಇರಿದು ಗಾಯಗೊಳಿಸಿರುವ ಘಟನೆ ರವಿವಾರ ಕೇಂದ್ರ ಕಾರಾಗೃಹದಲ್ಲಿ ವರದಿಯಾಗಿದೆ.
ಉಡುಪಿಯಿಂದ ಬಂದಿದ್ದ ಆರೋಪಿ ಪ್ರಶಾಂತ್ ಹಲ್ಲೆ ನಡೆಸಿದ್ದಾನೆನ್ನಲಾಗಿದೆ. ಪ್ರಶಾಂತ್ ನ್ಯಾಯಾಧೀಶರನ್ನು ನಿಂಧಿಸಿ ಜೈಲು ಪಾಲಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದು ಬಂದಿದೆ.
ಕುಡಿಯುವ ನೀರಿನ ವಿಚಾರವಾಗಿ ಪ್ರಶಾಂತ್ ಖ್ಯಾತೆ ತೆಗೆದಿದ್ದಾನೆ. ನಂತರ ಜಗಳ ತಾರಕಕ್ಕೇರಿದೆ. ತಕ್ಷಣ ಜಗಳ ಬಿಡಿಸಲು ಮುಂದಾದ ಮೂವರು ಕೈದಿಗಳ ಮೇಲೆ ಕುಡಿಯುವ ನೀರಿನ ಲೋಟದಿಂದ ಗಾಯಗೊಳಿಸಿದ್ದಾನೆ ಎನ್ನಲಾಗಿದೆ.
ಚಿಕ್ಕಮಗಳೂರಿನ ಬೆನಕಶೆಟ್ಟಿ, ಶಿವಮೊಗ್ಗದ ದೇವೇಂದ್ರಪ್ಪ ಹಾಗೂ ಮಲ್ಲೇಶಪ್ಪ ಎಂಬವರಿಗೆ ಗಾಯಗಳಾಗಿವೆ. ತಕ್ಷಣ ನಗರದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
Next Story





