ಕಾಬೂಲ್: ಕಾರ್‌ಬಾಂಬ್ ಸ್ಫೋಟಕ್ಕೆ ಕನಿಷ್ಠ 9 ಬಲಿ

ಕಾಬೂಲ್,ಡಿ.20: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ರವಿವಾರ ಬೆಳಗ್ಗೆ ನಡೆದ ಭೀಕರ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಹಾಗೂ ಇತರ 20 ಮಂದಿ ಗಾಯಗೊಂಡಿದ್ದಾರೆ.
ಸ್ಫೋಟದಲ್ಲಿ ಅಫ್ಘಾನ್ ಸಂಸತ್ ಸದಸ್ಯ ಖಾನ್ ಮುಹಮ್ಮದ್ ವಾರ್ದಾಕ್ ಅವರಿಗೂ ಗಾಯಗಳಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಕಾಬೂಲ್‌ನ ಖೋಶಾಲ್ ಖಾನ್ ವಸತಿ ಪ್ರದೇಶದಲ್ಲಿರುವ ಇಂಟರ್‌ಸೆಕ್ಷನ್ ರಸ್ತೆ ಬಳಿ ಸಂಸದ ಮುಹಮ್ಮದ್ ವಾರ್ದಾಕ್ ಅವರಿದ್ದ ವಾಹನ ವ್ಯೂಹ ಆಗಮಿಸುತ್ತಿದ್ದಾಗ ಕಾರ್ ಬಾಂಬ್ ಸ್ಫೋಟಿಸಿದೆ. ಆಸುಪಾಸಿನಲ್ಲಿದ್ದ ಸಾರ್ವಜನಿಕ ವಾಹನಗಳು ಬೆಂಕಿಗಾಹುತಿಯಾಗಿವೆ. ಸುತ್ತಮುತ್ತಲಿನ ಕಟ್ಟಡಗಳು ಹಾಗೂ ಅಂಗಡಿಗಳು ಕೂಡಾ ಹಾನಿಗೀಡಾಗಿವೆ ಎಂದು ಮೂಲಗಳು ತಿಳಿಸಿವೆ. ಈ ದಾಳಿಯ ಹೊಣೆಯನ್ನು ಈತನಕ ಯಾವುದೇ ಸಂಘಟನೆಯು ತಕ್ಷಣವೇ ವಹಿಸಿಕೊಂಡಿಲ್ಲ.
ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ತಾಲಿಬಾನ್ ಬಂಡುಕೋರರು ನಾಗರಿಕರ ವಿರುದ್ಧ ಹಿಂಸಾಚಾರ ಎಸಗುವುದನ್ನು ನಿಲ್ಲಿಸಬೇಕು ಹಾಗೂ ಪ್ರಸಕ್ತ ನಡೆಯುತ್ತಿರುವ ಶಾಂತಿ ಮಾತುಕತೆಯನ್ನು ಸುಗಮಗೊಳಿಸಲು ಕದನವಿರಾಮವನ್ನು ಒಪ್ಪಿಕೊಳ್ಳಬೇಕೆಂದು ಆಗ್ರಹಿಸಿದರು.





