ಮನ್ ಕೀ ಬಾತ್ ಮುಗಿಯುವ ತನಕ ಮನೆಯಲ್ಲಿ ತಟ್ಟೆ ಬಾರಿಸುವಂತೆ ರೈತರ ಕರೆ

ಹೊಸದಿಲ್ಲಿ: ರೈತರ ಪ್ರತಿಭಟನೆ ರವಿವಾರ 25 ದಿನಕ್ಕೆ ತಲುಪಿದ್ದು ಪ್ರತಿಭಟನೆಯಲ್ಲಿ ಭಾಗಿಯಾಗಿ ಮೃತಪಟ್ಟ ರೈತರಿಗೆ ಶ್ರದ್ದಾಂಜಲಿ ಅರ್ಪಿಸಲಾಗಿದೆ.
ಡಿಸೆಂಬರ್ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಂಗಳ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್ ನಲ್ಲಿ ಭಾಷಣ ಮಾಡಲಿದ್ದು, ಈ ಸಂದರ್ಭ ಊಟದ ತಟ್ಟೆಯನ್ನು ಹಿಡಿದು ಬಾರಿಸಬೇಕು. ಅವರ ಭಾಷಣ ಮುಗಿಯುವವರೆಗೂ ರೈತರ ಪ್ರತಿಭಟನೆಗೆ ಬೆಂಬಲ ನೀಡುವ ಪ್ರತಿಯೊಬ್ಬರೂ ತಟ್ಟೆಯನ್ನು ಬಾರಿಸಬೇಕೆಂದು ಭಾರತೀಯ ಕಿಸಾನ್ ಯೂನಿಯನ್‌ನ ಜಗಜಿತ್ ಸಿಂಗ್ ರವಿವಾರ ಮನವಿ ಮಾಡಿದ್ದಾರೆ.
ಹರ್ಯಾಣ ಟೋಲ್ ಪ್ಲಾಝಾದಲ್ಲಿ ಡಿ.25ರಿಂದ 27ರ ತನಕ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ. ಡಿ.23 ರಂದು ಕಿಸಾನ್ ದಿವಸ್ ಆಚರಿಸಲಾಗುತ್ತದೆ. ಆದರೆ ಈ ಬಾರಿ ಅದನ್ನು ಅಚರಿಸದಿರಲು ನಿರ್ಧರಿಸಲಾಗಿದೆ ಎಂದು ಯೂನಿಯನ್ ತಿಳಿಸಿದೆ.
ನಾಳೆ ನಾವು ಒಂದು ದಿನ ರೈತರಿಗೆ ಬೆಂಬಲ ಸೂಚಿಸಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಎಲ್ಲೆಲ್ಲಿ ರೈತರ ಪ್ರತಿಭಟನೆ ನಡೆಯುತ್ತದೆಯೋ, ಅಲ್ಲೆಲ್ಲಾ ನಾವು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಕೊರೋನ ವೈರಸ್‌ನಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ ಸಂದರ್ಭದಲ್ಲಿ ವೈದ್ಯಕೀಯ ವೃತ್ತಿಪರರಿಗೆ ಗೌರವ ನೀಡುವ ಸಲುವಾಗಿ ದೇಶದ ನಾಗರಿಕರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಬೇಕು ಹಾಗೂ ತಟ್ಟೆಯಿಂದ ಶಬ್ದ ಮಾಡಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದ್ದರು.







