ತೃಣಮೂಲ ಕಾಂಗ್ರೆಸ್ ಸೇರಿದ ಪತ್ನಿಗೆ ವಿಚ್ಛೇದನ ನೀಡುವುದಾಗಿ ಹೇಳಿದ ಬಿಜೆಪಿ ನಾಯಕ

ಸುಜಾತಾ ಮೊಂಡಲ್ ಖಾನ್
ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸೇರಿದ ತಮ್ಮ ಪತ್ನಿ ಸುಜಾತಾ ಮೊಂಡಲ್ ಖಾನ್ ಅವರಿಂದ ವಿಚ್ಛೇದನ ಪಡೆಯುವುದಾಗಿ ಬಿಜೆಪಿ ಸಂಸದ ಸೌಮಿತ್ರ ಖಾನ್ ಹೇಳಿದ್ದಾರೆ.
ತಮ್ಮ ಪತ್ನಿ ಸುಜಾತಾ ತೃಣಮೂಲ ಕಾಂಗ್ರೆಸ್ ಸೇರುತ್ತಿದ್ದಂತೆಯೇ ಅತ್ತು ಬಿಟ್ಟ ಸೌಮಿತ್ರ ಖಾನ್, “ರಾಜಕಾರಣ ನಮ್ಮ ವಿವಾಹವನ್ನು ಕೊನೆಗಾಣಿಸಿದೆ,'' ಎಂದರು.
ಮಾಜಿ ತೃಣಮೂಲ ನಾಯಕರಾಗಿದ್ದ ಸೌಮಿತ್ರ ಖಾನ್ ಅವರು 2014 ಚುನಾವಣೆಯನ್ನು ಬಿಷ್ಣುಪುರ್ ಕ್ಷೇತ್ರದಿಂದ ಗೆದ್ದಿದ್ದರು. ಅವರು ಬಿಜೆಪಿಯ ಯುವ ಮೋರ್ಚ ಘಟಕದ ಅಧ್ಯಕ್ಷರಾಗಿದ್ದಾರೆ. ಕಳೆದ ವರ್ಷದ ಲೋಕಸಭಾ ಚುನಾವಣೆ ವೇಳೆ ಕ್ರಿಮಿನಲ್ ಪ್ರಕರಣವೊಂದರ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಸೌಮಿತ್ರ ಅವರು ಕ್ಷೇತ್ರಕ್ಕೆ ಪ್ರವೇಶಿಸುವುದು ಸಾಧ್ಯವಾಗದೇ ಇದ್ದರೂ ಅವರ ಪತ್ನಿಯೇ ಏಕಾಂಗಿಯಾಗಿ ಅವರ ಪರ ಪ್ರಚಾರ ನಡೆಸಿ ಅವರನ್ನು ಗೆಲ್ಲಿಸಿದ್ದರು.
ಆ ಸಂದರ್ಭ ಬಿಜೆಪಿಯಲ್ಲಿದ್ದ ಸುಜಾತಾ ಖಾನ್ ಅವರು ಪ್ರಚಾರ ವೇಳೆ ಪ್ರಧಾನಿ ಮೋದಿ ಜತೆ ವೇದಿಕೆ ಹಂಚಿಕೊಂಡಿದ್ದರು. ಆದರೆ ತಮ್ಮ ಪತಿಯ ಜಯಕ್ಕಾಗಿ ತಾವು ಪಟ್ಟ ಅಷ್ಟೊಂದು ಶ್ರಮವನ್ನು ಬಿಜೆಪಿ ಗುರುತಿಸಿಲ್ಲ ಎಂದು ಅವರು ದೂರಿದ್ದಾರೆ.
“ನನಗೆ ಉಸಿರಾಡಬೇಕಿದೆ, ನನಗೆ ಗೌರವ ಬೇಕಿದೆ. ನನಗೆ ಒಂದು ಸಮರ್ಥ ಪಕ್ಷದ ಸಮರ್ಥ ನಾಯಕಿಯಾಗಬೇಕಿದೆ. ನನಗೆ ನನ್ನ ಪ್ರೀತಿಯ ದೀದಿ ಜತೆ ಕೆಲಸ ಮಾಡಬೇಕಿದೆ,'' ಎಂದು ಮಾಜಿ ಶಿಕ್ಷಕಿಯಾಗಿರುವ ಸುಜಾತಾ ಹೇಳಿದ್ದಾರೆ.
ಅತ್ತ ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸಿದ ಸೌಮಿತ್ರ ಖಾನ್ “ರಾಜಕಾರಣದಿಂದಾಗಿ ಹತ್ತು ವರ್ಷದ ಸಂಬಂಧ ಕೊನೆಗೊಂಡಿದೆ. ನಾನೀಗ ಬಿಜೆಪಿಗಾಗಿ ಇನ್ನಷ್ಟು ಶ್ರಮ ಪಡುತ್ತೇನೆ,'' ಎಂದು ಹೇಳುವ ಮೂಲಕ ತಾವು ಪಕ್ಷದಲ್ಲಿಯೇ ಉಳಿಯುವ ಸೂಚನೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸುಜಾತಾ ಖಾನ್ “ಪಕ್ಷ ಹಾಗೂ ರಾಜಕೀಯ ಬೇರೆ ಬೇರೆ, ಅವರು ಅವರಿಗೆ ಹೇಗೆ ಬೇಕೋ ಹಾಗೆ ಮಾಡಲಿ, ಆದರೆ ಅವರಿಗೆ ಒಂದು ದಿನ ಎಲ್ಲವೂ ಅರಿವಿಗೆ ಬರಲಿದೆ. ಯಾರಿಗೆ ಗೊತ್ತು, ಮುಂದೊಂದು ದಿನ ಅವರು ಮತ್ತೆ ತೃಣಮೂಲಕ್ಕೆ ವಾಪಸಾಗಬಹುದು,'' ಎಂದಿದ್ದಾರೆ.







