'ಬಿಜೆಪಿ-ಜೆಡಿಎಸ್ ವಿಲೀನ' ಕುರಿತು ಹೇಳಿಕೆ ನೀಡದಂತೆ ಪಕ್ಷದ ಮುಖಂಡರಿಗೆ ಯಡಿಯೂರಪ್ಪ ತಾಕೀತು

ಬೆಂಗಳೂರು, ಡಿ. 21: ಬಿಜೆಪಿ ಹಾಗೂ ಜೆಡಿಎಸ್ ವಿಲೀನದ ಕುರಿತು ಪಕ್ಷದ ಯಾವುದೇ ಮುಖಂಡರು ಹೇಳಿಕೆಗಳನ್ನು ನೀಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ವಿಲೀನದ ಬಗ್ಗೆ ಮಾತನಾಡುವುದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಿದಂತೆ ಎಂದು ತಿಳಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿಯವರು, ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ವಿಧಾನ ಪರಿಷತ್‍ನಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ವಿಚಾರಕಷ್ಟೇ ಸೀಮಿತವಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಅದನ್ನು ಹೊರತುಪಡಿಸಿದರೆ ಬೇರೆ ವಿಚಾರಗಳಿಗೆ ಬೆಂಬಲ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ನಾಲ್ಕು ತಿಂಗಳು ಸಮಯವಿದೆ. ಹೀಗಾಗಿ ಅವರು ಅವರ ಪಕ್ಷ ಸಂಘಟಿಸುವ ಕೆಲಸದಲ್ಲಿ ತೊಡಗಿದ್ದಾರೆ. ನಮ್ಮ ಪಕ್ಷವನ್ನು ನಾವು ಕಟ್ಟುತ್ತಿದ್ದೇವೆ. ಜೆಡಿಎಸ್–ಬಿಜೆಪಿ ವಿಲೀನದ ಬಗ್ಗೆ ಯಾರೂ ಮಾತನಾಡಬಾರದು ಎಂದು ಪುನರುಚ್ಚರಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಕಟ್ಟಿರುವ ಜಾತ್ಯತೀತ ಜನತಾ ದಳ ಪಕ್ಷ, ಆ ಪಕ್ಷಕ್ಕೆ ಅವರೇ ನೇತಾರರು. ಅವರು ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷವನ್ನು ಏಕೆ ವಿಲೀನ ಮಾಡುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಅನಗತ್ಯ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಯಡಿಯೂರಪ್ಪ ಆಕ್ಷೇಪಿಸಿದರು.
‘ಜೆಡಿಎಸ್–ಬಿಜೆಪಿ ಜೊತೆ ವಿಲೀನವಾಗುತ್ತದೆ ಎಂಬುದು ಅಪ್ಪಟ ಸುಳ್ಳು. ಈ ಬಗ್ಗೆ ಬಿಜೆಪಿಯಲ್ಲಿ ಯಾವುದೇ ಚರ್ಚೆಯೂ ನಡೆದಿಲ್ಲ. ವಿಧಾನಸಭೆ ಚುನಾವಣೆ ಇನ್ನೂ ಬಹಳ ದೂರ ಇದೆ. ವಿಧಾನಸಭೆ ಚುನಾವಣೆ ಬಂದಾಗ ನೋಡೋಣ.’
-ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ







