ರಾಜ್ಯದಲ್ಲಿ ಮಂಗಳವಾರ ಮೊದಲನೇ ಹಂತದ ಗ್ರಾ.ಪಂ. ಚುನಾವಣೆ: 1,17,383 ಅಭ್ಯರ್ಥಿಗಳು ಕಣದಲ್ಲಿ

ಬೆಂಗಳೂರು, ಡಿ.21: ರಾಜ್ಯಾದ್ಯಂತ ಮಂಗಳವಾರ (ಡಿ.22) ಮೊದಲನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, 113 ತಾಲೂಕುಗಳ 3,019 ಗ್ರಾಮ ಪಂಚಾಯತ್‍ಗಳ 43,238 ಸ್ಥಾನಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತದಾರರು ಮತ ಚಲಾವಣೆ ಮಾಡಲಿದ್ದಾರೆ.
ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮತದಾನ ನಡೆಯಲಿದೆ. ಮೊದಲನೇ ಹಂತದಲ್ಲಿ 3,019 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ. ಈ ಪಂಚಾಯತ್‍ಗಳ ಒಟ್ಟು ಸ್ಥಾನಗಳು 48,048 ಸ್ಥಾನಗಳಾಗಿದ್ದು, ಅದರಲ್ಲಿ ಈಗಾಗಲೇ 4,377 ಮಂದಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಉಳಿದ 43,238 ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ.
ರಾಜ್ಯದಲ್ಲಿ ಮೊದಲನೇ ಹಂತಕ್ಕೆ ಸುಮಾರು 1,64,550 ನಾಮಪತ್ರಗಳು ಸಲ್ಲಿಕೆಯಾಗಿದ್ದು, 40,352 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಅಲ್ಲದೆ, 432 ಸ್ಥಾನಗಳಿಗೆ ಯಾವುದೇ ಅಭ್ಯರ್ಥಿಯು ನಾಮಪತ್ರ ಸಲ್ಲಿಸದಿದ್ದರಿಂದ ಅವು ಖಾಲಿಯುಳಿದಿವೆ. ಅಂತಿಮ ಕಣದಲ್ಲಿ 1,17,383 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚುನಾವಣಾ ಆಯೋಗವು ವ್ಯವಸ್ಥಿತವಾದ ಚುನಾವಣೆ ನಡೆಸಲು ಎಲ್ಲ ಸಿದ್ಧತೆ ನಡೆಸಿದ್ದು, ಬೀದರ್ ಜಿಲ್ಲೆಯಲ್ಲಿ ಇವಿಎಂ ಬಳಕೆ ಮಾಡಲಾಗುತ್ತಿದೆ.
ಕೊರೋನ ಸೋಂಕು ಹರಡುತ್ತಿರುವ ಸಂದರ್ಭದಲ್ಲಿಯೇ ಚುನಾವಣೆ ನಡೆಸುತ್ತಿರುವ ಆಯೋಗವು ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಯಾರೂ ಮತದಾನದಿಂದ ಹೊರಗುಳಿಯಬಾರದಂತೆ ಕ್ರಮ ವಹಿಸಿದ್ದು, ಕೊರೋನ ಸೋಂಕಿತರು ಮತದಾನ ಮಾಡಲು ಕೊನೆಯ 1 ಗಂಟೆ ಅವಕಾಶ ನೀಡಲಾಗುತ್ತಿದೆ.
ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, 5847 ಚುನಾವಣಾ ಅಧಿಕಾರಿ ಹಾಗೂ 6085 ಸಹಾಯಕ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಿದೆ. 45,128 ಮತಗಟ್ಟೆಗಳಿಗೆ ಸುಮಾರು 2,70,268 ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಈ ಬಾರಿ 45 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿಯಾಗದಂತೆ ಹಾಗೂ ಸಿಬ್ಬಂದಿಗಳ ಕೊರತೆಯಾಗದಂತೆ ಯೋಜಿಸಿ ಮತದಾನ ನಡೆಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಗ್ರಾಮ ಪಂಚಾಯತ್ ಚುನಾವಣೆ ಪಕ್ಷಗಳ ಆಧಾರರಹಿತವಾಗಿ ನಡೆಯಲಿದೆ. ಆದುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ರಾಜಕೀಯ ಪಕ್ಷಗಳಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಎಲ್ಲಾ ರಾಜಕೀಯ ಪಕ್ಷದ ಮುಖಂಡರಿಗೆ ಹಾಗೂ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳು ಕಾನೂನು ಉಲ್ಲಂಘನೆಯಾಗದಂತೆ ತಡೆಯಲು ರಾಜ್ಯ ಚುನಾವಣಾ ಆಯೋಗದ ಜೊತೆ ಸಹಕಾರ ನೀಡಬೇಕಿದೆ. ಅಭ್ಯರ್ಥಿಗಳು ಅಗತ್ಯ ಮಾಹಿತಿಯನ್ನು ತಿಳಿಯಬೇಕಿದೆ.
ಮತಗಟ್ಟೆಗಳ ಹೊರಗೆ ಮತದಾನ ದಿನದಂದು ಚಿಹ್ನೆ ಇರುವ ಕರಪತ್ರಗಳನ್ನು ಮುದ್ರಿಸುವುದು/ ಹಂಚುವುದು ಮಾಡುವಂತಿಲ್ಲ. ರಾಜಕೀಯ ಮುಖಂಡರ ಭಾವಚಿತ್ರ ರಾಜಕೀಯ ಪಕ್ಷಗಳ ಚಿಹ್ನೆ ಇರುವ ಕರಪತ್ರಗಳು, ಕಟೌಟ್‍ಗಳು, ಬ್ಯಾನರ್ ಮತ್ತು ಬಂಟಿಂಗ್‍ಗಳ ಮೂಲಕ ಪ್ರಚಾರ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಅಭ್ಯರ್ಥಿಗಳು ಟಿವಿ ಮಾಧ್ಯಮಗಳು, ಪತ್ರಿಕೆಗಳ ಮೂಲಕ ರಾಜಕೀಯ ಮುಖಂಡ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆಗಳನ್ನು ಬಳಸಿ ಜಾಹೀರಾತು ನೀಡುವಂತಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
1853 ಕೆಎಸ್ಸಾರ್ಟಿಸಿ ಬಸ್‍ಗಳ ಬಳಕೆ: ಮೊದಲ ಹಂತದ ಗ್ರಾಮಪಂಚಾಯತ್ ಚುನಾವಣೆ ನಾಳೆ(ಡಿ.22) ನಡೆಯಲಿರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿಗೆ 1853 ಬಸ್‍ಗಳನ್ನು ಒಪ್ಪಂದದ ಮೇಲೆ ನೀಡಲಾಗಿದೆ. ಮತಗಟ್ಟೆಗಳಿಗೆ ಸಿಬ್ಬಂದಿ, ಮತಪೆಟ್ಟಿಗೆ ಮತ್ತಿತರ ಸಾಮಗ್ರಿಗಳನ್ನು ಕೊಂಡೊಯ್ಯಲು ಮತ್ತು ಮರಳಿ ಕರೆತರಲು ಬಸ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬೆಂಗಳೂರು ವಿಭಾಗ-32, ರಾಮನಗರ-84, ತುಮಕೂರು-118, ಕೋಲಾರ-125, ಚಿಕ್ಕಬಳ್ಳಾಪುರ-139, ಮೈಸೂರು ಗ್ರಾಮಾಂತರ-176, ಮಂಡ್ಯ-155, ಚಾಮರಾಜನಗರ-110, ಹಾಸನ-114, ಚಿಕ್ಕಮಗಳೂರು-153, ಮಂಗಳೂರು-188, ಪುತ್ತೂರು-55, ದಾವಣಗೆರೆ-78, ಶಿವಮೊಗ್ಗ-149, ಚಿತ್ರದುರ್ಗ-177 ಬಸ್‍ಗಳನ್ನು ನೀಡಲಾಗಿದೆ.
ಬಿಗಿಭದ್ರತೆ: ನಾಳಿನ ಗ್ರಾಮ ಪಂಚಾಯತ್ ಚುನಾವಣೆಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಪ್ರತಿ ಮತಗಟ್ಟೆಗೂ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಗ್ರಾಮ ಪಂಚಾಯತ್ ಗಳ 2ನೇ ಹಂತದ ಚುನಾವಣೆ ಡಿ.27 ರಂದು ನಡೆಯಲಿದ್ದು, ಮತ ಎಣಿಕೆ ಡಿ.30 ರಂದು ನಡೆಯಲಿದೆ.
ಹೆಬ್ಬೆರಳಿಗೆ ಶಾಹಿ ಗುರುತು: ಇತ್ತೀಚಿಗೆ ವಿಧಾನಸಭಾ ಉಪ ಚುನಾವಣೆ ಹಾಗೂ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆ, ಸೊಸೈಟಿಗಳಿಗೆ ಚುನಾವಣೆ ನಡೆದಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾರರ ಎಡಗೈನ ಹೆಬ್ಬೆರಳಿಗೆ ಅಳಿಸಲಾಗದ ಶಾಯಿಯನ್ನು ಬಳಿಯಲಾಗುತ್ತದೆ.
ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು, ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮತಗಟ್ಟೆ ಪ್ರವೇಶಿಸಬೇಕು.







