ರೂಪಾಂತರಿತ ಕೊರೋನ ವೈರಸ್ ಪತ್ತೆ, ಕೇಂದ್ರದಿಂದ ಕಟ್ಟೆಚ್ಚರ: ಹರ್ಷವರ್ಧನ್

ಹೊಸದಿಲ್ಲಿ, ಡಿ.21: ಬ್ರಿಟನ್‌ನಲ್ಲಿ ರೂಪಾಂತರಗೊಂಡ ಕೊರೋನ ವೈರಸ್ ಕಂಡುಬಂದಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಭಾರತ ಸರಕಾರ ಸಂಪೂರ್ಣ ಎಚ್ಚರಿಕೆ ವಹಿಸಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಕಾಲ್ಪನಿಕ ಸನ್ನಿವೇಶ, ಕಾಲ್ಪನಿಕ ಮಾತು ಹಾಗೂ ಕಾಲ್ಪನಿಕ ಭೀತಿಗಳಿಂದ ತೊಂದರೆಗೊಳಗಾಗಬೇಡಿ.
ಸರಕಾರ ಸಂಪೂರ್ಣ ಎಚ್ಚರಿಕೆ ವಹಿಸಿದೆ. ಜನರ ಸುರಕ್ಷತೆಯನ್ನು ಖಾತರಿಪಡಿಸಲು ಕಳೆದ ಒಂದು ವರ್ಷದಿಂದ ಸರಕಾರ ಕೈಗೊಂಡಿರುವ ಉಪಕ್ರಮಗಳು ನಿಮಗೆ ತಿಳಿದಿದೆ ಎಂದು ಹರ್ಷವರ್ಧನ್ ಹೇಳಿದರು. ಇಂಡಿಯಾ ಸಯನ್ಸ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಇದಕ್ಕೂ ಮುನ್ನ ಸಚಿವರು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಇಲಾಖೆಯ ಜಂಟಿ ಮೇಲುಸ್ತುವಾರಿ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಹೊಸ ಸ್ವರೂಪದ ಕೊರೋನ ಸೋಂಕಿನ ಕುರಿತ ವರದಿಯ ಬಗ್ಗೆ ಚರ್ಚೆ ನಡೆಸಿದರು.
ಸೆಪ್ಟಂಬರ್‌ನಲ್ಲಿ ಆಗ್ನೇಯ ಇಂಗ್ಲೆಂಡಿನಲ್ಲಿ ಮೊದಲ ಬಾರಿಗೆ ಹೊಸ ಸ್ವರೂಪದ ಕೊರೋನ ಸೋಂಕು ಕಾಣಿಸಿಕೊಂಡಿದೆ. ಬಳಿಕ ಕ್ಷಿಪ್ರವಾಗಿ ಲಂಡನ್ ಹಾಗೂ ಇತರ ಪ್ರಮುಖ ನಗರಗಳಿಗೆ ವ್ಯಾಪಿಸಿದ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಹೊಸ ನಿರ್ಬಂಧ ಜಾರಿಗೊಳಿಸಲಾಗಿದೆ. ಹೊಸ ಸ್ವರೂಪದ ಸೋಂಕು ನಿಯಂತ್ರಣ ಮೀರಿ ಹರಡಿದೆ ಎಂದು ರವಿವಾರ ಬ್ರಿಟನ್ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್‌ಕಾಕ್ ಹೇಳಿಕೆ ನೀಡಿದ್ದರು. ಇತ್ತೀಚೆಗೆ ಬ್ರಿಟನ್‌ನಿಂದ ಹಿಂದಿರುಗಿದ ಇಟಲಿಯ ವ್ಯಕ್ತಿಯೊಬ್ಬರಲ್ಲಿ ಹೊಸ ಸ್ವರೂಪದ ಕೊರೋನ ಸೋಂಕಿನ ಲಕ್ಷಣ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಕೊರೋನದ ಹೊಸ ಮಾದರಿ 70ಶೇ. ಅಧಿಕ ಸಾಂಕ್ರಾಮಿಕದ ಲಕ್ಷಣ ಹೊಂದಿದೆ ಎಂಬ ವರದಿಯ ಬಳಿಕ ಕೆನಡಾ, ಸೌದಿ ಅರೇಬಿಯಾ ಹಾಗೂ ಹಲವು ಯುರೋಪಿಯನ್ ದೇಶಗಳು ಬ್ರಿಟನ್‌ಗೆ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.







