ಗುರು- ಶನಿ ಗ್ರಹಗಳ ಅಪರೂಪದ ಜೋಡಿ : ಉಡುಪಿ ಪಿಪಿಸಿಯಲ್ಲಿ ವೀಕ್ಷಣೆ

ಉಡುಪಿ, ಡಿ.21: ಆಕಾಶದಲ್ಲಿ 20 ವರ್ಷಗಳಿಗೊಮ್ಮೆ ಗೋಚರಿಸುವ ಖಗೋಳ ವಿಸ್ಮಯ ಗುರು-ಶನಿ ಸಮಾಗಮವನ್ನು ಇಂದು ಸಂಜೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆವರಣದಲ್ಲಿ ಖಗೋಳ ವೀಕ್ಷಕರು ನೋಡಿ ಸಂಭ್ರಮಿಸಿದರು.
ಉಡುಪಿ ಪೂರ್ಣ ಪ್ರಜ್ಞಾ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವತಿಯಿಂದ ವ್ಯವಸ್ಥೆ ಮಾಡಲಾದ 3 ಟೆಲಿಸ್ಕೋಪ್‌ಗಳಲ್ಲಿ 200 ಮಂದಿ ಸಾರ್ವಜನಿಕರು ಈ ಖಗೋಳ ಕೌತುಕವನ್ನು ವೀಕ್ಷಿಸಿದರು. ಒಂದು ಟೆಲಿಸ್ಕೋಪನ್ನು ಯುಟ್ಯೂಬ್ ಲೈವ್ ಸ್ಟ್ರೀಮ್ ಇರಿಸಲಾಗಿತ್ತು.
ಪಿಪಿಸಿ ನಿವೃತ್ತ ಪ್ರಾಂಶುಪಾಲ, ಖಗೋಳ ತಜ್ಞ ಡಾ.ಎ.ಪಿ ಭಟ್, ಬೆಂಗಳೂರು ಜವಹಾರ್‌ಲಾಲ್ ನೆಹರು ತಾರಾಲಯದ ಮಾಜಿ ನಿರ್ದೇಶಕ ಡಾ.ಬಿ.ಎಸ್ ಶೈಲಜಾ ಸಾರ್ವಜನಿಕರಿಗೆ ಗುರು-ಶನಿ ಸಮಾಗಮದ ಬಗ್ಗೆ ಮಾಹಿತಿ ನೀಡಿದರು. ಪೂರ್ಣಪ್ರಜ್ಞ ಕಾಲೇಜು ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಮೊಹಮ್ಮದ್ ಅಶೀಂ ಗುರು-ಶನಿ ಕೋನಾಂತರವನ್ನು ಮಾಪನ ಮಾಡಿದ್ದರು.
ಈ ಬಗ್ಗೆ ವಿವರಣೆ ನೀಡಿದ ಪೂರ್ಣಪ್ರಜ್ಞಾ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್, ಗುರು ಹಾಗು ಶನಿಯ ತುಂಬಾ ಹತ್ತಿರದಲ್ಲಿ ಕಾಣುವ ಈ ವಿಶೇಷ ವಿದ್ಯಮಾನವನ್ನು ಗ್ರೇಟ್ ಕಂಜಂಕ್ಷನ್ ಕರೆಯಲಾಗುತ್ತದೆ. ಭೂಮಿಯಿಂದ ಸೂರ್ಯನಿಗಿರುವ ದೂರದ (ಖಗೋಳಮಾನ), 5 ರಷ್ಟು ದೂರದಲ್ಲಿ ಗುರುಗ್ರಹವಿದ್ದು ಇದು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷಗಳು ಬೇಕು. ಶನಿಯು, ಭೂಮಿ ಹಾಗು ಸೂರ್ಯನ ಅಂತರದ 2 ರಷ್ಟು ಅಂತರವಿದ್ದು, ಪರಿಭ್ರಮಿಸಲು 29.46 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದರು.
ಈ ಎರಡು ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಬೇಕು.ಈ ಗ್ರಹಗಳು ಒಂದೇ ಸಮತಲದಲ್ಲಿ ಪರಿಭ್ರಮಿಸುವುದಿಲ್ಲ. ಹಾಗು ಪ್ರತಿ ಸಮಾಗಮದಲ್ಲಿ ಅವುಗಳ ನಡುವಿನ ಅಂತರ ಬದಲಾಗುತ್ತಿರುತ್ತದೆ. ಶನಿ ಗ್ರಹ ಸೂರ್ಯನ ಸುತ್ತ ಸುತ್ತಲೂ 19 ವರ್ಷ ತೆಗೆದುಕೊಂಡರೇ, ಗುರು ಗ್ರಹ 11 ವರ್ಷ ತೆಗೆದುಕೊಳ್ಳಲಿದೆ. ಇದು ಭೂಮಿಗೆ ಹತ್ತಿರವಾಗಿ ಕಾಣಿಸುವುದು 20 ವರ್ಷಕ್ಕೆ ಮಾತ್ರ. ಈ ಹಿಂದೆ 2000 ಇಸವಿಯಲ್ಲಿ ಕೋನಾಂತರ 1 ಡಿಗ್ರಿಗಿಂತ ಹೆಚ್ಚು ಕಾಣಿಸಿದ್ದು, ಈ ಸಲ 0.1 ಡಿಗ್ರಿ ಅಂತರದಲ್ಲಿ ಗೋಚರವಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಇಷ್ಟೇ ಹತ್ತಿರ 1624 ವರ್ಷದ ಹಿಂದೆ ಗುರು ಮತ್ತು ಶನಿಗ್ರಹ ಸಾಮಿಪ್ಯವಾಗಿತ್ತು. ಸೂರ್ಯನ ಹತ್ತಿರ ಇದ್ದುದರಿಂದ ಇದು ಗೋಚರಿಸಿ ರಲಿಲ್ಲ. ಬಳಿಕ 794 ವರ್ಷದ ಹಿಂದೆ ಭೂಮಿ ಮೇಲೆ ಇಷ್ಟು ಹತ್ತಿರದಿಂದ ಗೋಚರವಾಗಿದೆ. ಮುಂದಿನ 2040 ಮತ್ತು 2080 ರಲ್ಲಿ ಈ ಸಮಾಗಮವನ್ನು ಕಣ್ತುಂಬಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.
.jpeg)







