ಅಲೋಶಿಯಸ್ ಕಾಲೇಜು ಪದವಿ ಪರೀಕ್ಷೆ : ಕೃಪಾಶ್ರೀ ನಾಡಿಗ್‌ಗೆ ಚಿನ್ನದ ಪದಕ

ಮಂಗಳೂರು, ಡಿ.21: ಮಂಗಳೂರು ಅಲೋಶಿಯಸ್ ಸ್ವಾಯತ್ತ ಕಾಲೇಜಿನ 2019ನೇ ಸಾಲಿನ ಫುಡ್ ಪ್ರೊಸೆಸಿಂಗ್ ಮತ್ತು ಇಂಜಿನಿಯರಿಂಗ್ ಅಂತಿಮ ಪದವಿ ಪರೀಕ್ಷೆಯಲ್ಲಿ ಎಂ.ಎಸ್. ಕೃಪಾಶ್ರೀ ನಾಡಿಗ್ ಮೊದಲ ರ್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಸೋಮವಾರ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನದ ಸರಳ ಸಮಾರಂಭದಲ್ಲಿ ಚಿನ್ನದ ಪದಕ ಸ್ವೀಕರಿಸಿದರು. ಮಂಗಳೂರಿನ ವಾಮಂಜೂರು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ರಿಯೋ ಡಿಸೋಜ ಪದವಿ ಪ್ರದಾನ ನೆರವೇರಿಸಿದರು.
ಅಲೋಶಿಯಸ್ ಕಾಲೇಜು ರೆಕ್ಟರ್ ರೆ.ಫಾ.ಮೆಲ್ವಿನ್ ಜೋಸೆಫ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಪ್ರಾಂಶುಪಾಲ ಡಾ.ಪ್ರವೀಣ್ ಮಾರ್ಟಿಸ್, ರಿಜಿಸ್ಟ್ರಾರ್ ಡಾ.ಅಲ್ವಿನ್ ಡಿಸೋಜ, ಸಂಯೋಜಕ ಪ್ರೇಮಲತಾ ಶೆಟ್ಟಿ ಇದ್ದರು. ಸುಮಾರು 60 ಮಂದಿ ಪದವಿ ಸ್ವೀಕರಿಸಿದರು.
ಮೊದಲ ರ್ಯಾಂಕ್ ಪಡೆದ ಕೃಪಾಶ್ರೀ ಮೂಲತಃ ಸಾಗರ ನಿವಾಸಿ, ಬೆಂಗಳೂರಿನ ನ್ಯಾಯವಾದಿ ಎಸ್.ಆರ್. ಶ್ರೀನಿವಾಸ ರಾವ್ ಮತ್ತು ಗೀತಾ ಶ್ರೀನಿವಾಸ್ ದಂಪತಿಯ ಪುತ್ರಿ. ಕೃಪಾಶ್ರೀ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ 15ನೇ ಸ್ಥಾನ ಪಡೆದಿದ್ದರು. ಪ್ರಸ್ತುತ ಕೃಪಾಶ್ರೀ ಅವರು ಫುಡ್ ಟೆಕ್ನಾಲಜಿ ಯಲ್ಲಿ ದಾವಣಗೆರೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ.







