ಮಾತುಕತೆಗೆ ಸಿದ್ಧ, ನಿಶ್ಚಿತ ಪರಿಹಾರ ಬೇಕು: ರೈತ ನಾಯಕರು
"ಸರಕಾರದ ಪತ್ರದಲ್ಲಿ ಹೊಸದೇನಿಲ್ಲ"

ಹೊಸದಿಲ್ಲಿ,ಡಿ.21: ಸರಕಾರವು ‘ನಿಶ್ಚಿತ ಪರಿಹಾರ’ದ ಕೊಡುಗೆಯನ್ನು ಮುಂದಿರಿಸುವವರೆಗೆ ಮಾತುಕತೆಗೆ ತಾವು ಸದಾ ಸಿದ್ಧರಿದ್ದೇವೆ ಎಂದು ಸೋಮವಾರ ಇಲ್ಲಿ ತಿಳಿಸಿದ ರೈತ ನಾಯಕರು,ಆದರೆ ಮುಂದಿನ ಸುತ್ತಿನ ಮಾತುಕತೆಗಳಿಗೆ ದಿನಾಂಕವನ್ನು ಕೋರಿ ಕೇಂದ್ರವು ತಮಗೆ ಬರೆದಿರುವ ಇತ್ತೀಚಿನ ಪತ್ರದಲ್ಲಿ ಹೊಸದೇನಿಲ್ಲ ಎಂದು ಹೇಳಿದರು.
‘ನೂತನ ಕೃಷಿ ಕಾನೂನುಗಳಿಗೆ ತಿದ್ದುಪಡಿಗಳನ್ನು ತರುವ ತನ್ನ ಹಿಂದಿನ ಪ್ರಸ್ತಾವದ ಕುರಿತು ಮಾತುಕತೆ ನಡೆಸಲು ತಾನು ಬಯಸಿರುವುದಾಗಿ ಮತ್ತು ಇನ್ನೊಂದು ಸುತ್ತಿನ ಮಾತುಕತೆಗಳಿಗಾಗಿ ದಿನಾಂಕವನ್ನು ತಿಳಿಸುವಂತೆ ಸರಕಾರವು ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಪ್ರಸ್ತಾವವನ್ನು ನಾವು ಈಗಾಗಲೇ ತಿರಸ್ಕರಿಸಿದ್ದೇವೆ. ಸರಕಾರದ ಪತ್ರಕ್ಕೆ ಹೇಗೆ ಉತ್ತರಿಸಬೇಕು ಎಂಬ ಬಗ್ಗೆ ನಾವೀಗ ಚರ್ಚಿಸುತ್ತಿದ್ದೇವೆ ’ ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಸುದ್ದಿಸಂಸ್ಥೆಗೆ ತಿಳಿಸಿದರು.
ಈ ಮೊದಲು ಡಿ.9ಕ್ಕೆ ನಿಗದಿಯಾಗಿದ್ದ ಮಾತುಕತೆಗಳು ರದ್ದುಗೊಂಡಿದ್ದವು.
ರವಿವಾರ 40 ರೈತ ನಾಯಕರಿಗೆ ಬರೆದಿರುವ ಪತ್ರದಲ್ಲಿ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರವಾಲ್ ಅವರು, ರೈತರು ಎತ್ತಿರುವ ಎಲ್ಲ ಕಳವಳಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಸರಕಾರವು ಮುಕ್ತ ಮನಸ್ಸಿನಿಂದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಸಾವಿರಾರು ರೈತರು ನೂತನ ಕೃಷಿಕಾನೂನುಗಳನ್ನು ವಿರೋಧಿಸಿ ಕಳೆದ 24 ದಿನಗಳಿಂದಲೂ ದಿಲ್ಲಿಯ ಗಡಿಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
‘ದಿನಾಂಕವೊಂದನ್ನು ನೀಡುವಂತೆ ಸರಕಾರವು ನಮಗೆ ಸೂಚಿಸಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಸರಕಾರವು ನಮ್ಮ ಅಹವಾಲು ಆಲಿಸಬೇಕೆಂದು ನಾವು ದಿನವಿಡೀ ಇಲ್ಲಿ ಕುಳಿತಿದ್ದೇವೆ. ವ್ಯಸ್ತ ಕಾರ್ಯಕ್ರಮಗಳನ್ನು ಹೊಂದಿರುವುದು ಅವರು. ಅವರೇ ದಿನಾಂಕವನ್ನು ಸೂಚಿಸಬೇಕು ಅಥವಾ ಇಲ್ಲಿ ನಮ್ಮ ಶಿಬಿರಗಳಿಗೆ ಬರಬೇಕು, ನಾವು ಹೇಗೆ ವಾಸವಿದ್ದೇವೆ ಎನ್ನುವುದನ್ನು ನೋಡಬೇಕು ಮತ್ತು ಮಾತುಕತೆಗಳನ್ನು ನಡೆಸಬೇಕು ಎಂದು ಅಖಿಲ ಭಾರತ ಕಿಸಾನ್ ಸಮಿತಿ(ಪಂಜಾಬ)ಯ ಸಹಾಯಕ ಕಾರ್ಯದರ್ಶಿ ಕಾಶ್ಮೆರ್ ಸಿಂಗ್ ಹೇಳಿದರು.
ಸರಕಾರದೊಂದಿಗೆ ಮಾತುಕತೆಗೆ ನಾವು ಸದಾ ಸಿದ್ಧರಿದ್ದೇವೆ,ಆದರೆ ಅದು ನಿಶ್ಚಿತ ಪರಿಹಾರದೊಂದಗೆ ಬರಬೇಕು ಎಂದು ದ್ವಾಬಾ ಕಿಸಾನ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಮರಜೀತ್ ಸಿಂಗ್ ರಾರ್ರಾ ಹೇಳಿದರು.
ಮುಂದಿನ ಕ್ರಿಯಾ ಯೋಜನೆಯ ಬಗ್ಗೆ ಚರ್ಚಿಸಲು ರೈತ ನಾಯಕರು ಮಂಗಳವಾರ ಸಭೆ ಸೇರುವ ನಿರೀಕ್ಷೆಯಿದೆ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್‌ನ ಗುರ್ಮೀತ್ ಸಿಂಗ್ ತಿಳಿಸಿದರು.







