ಕೋವಿಡ್ ನಿಂದ ಕೆಲಸ ಕಳೆದುಕೊಂಡಿದ್ದ ಅನಿವಾಸಿ ಭಾರತೀಯ ರಾತ್ರೋರಾತ್ರಿ ಕೋಟ್ಯಧೀಶನಾದ!

ಫೋಟೊ ಕೃಪೆ: Khaleej Times
ಅಬುಧಾಬಿ: ರಾತ್ರೋರಾತ್ರಿ ಒಬ್ಬರ ಜೀವನ ಹೇಗೆ ಬದಲಾಗಬಹುದು ಎಂದು ಯಾರಿಗೂ ಗೊತ್ತಿರುವುದಿಲ್ಲ. ಕೋವಿಡ್-19ನಿಂದಾಗಿ ನಿರುದ್ಯೋಗಿಯಾಗಿದ್ದ ಕೇರಳ ಮೂಲದ 30ರ ವಯಸ್ಸಿನ ನವನೀತ್ ಸಂಜೀವನ್ ಕೆಲಸದ ಹುಡುಕಾಟದಲ್ಲಿ ವ್ಯಸ್ತರಾಗಿದ್ದರು. ಒಂದು ಫೋನ್ ಕರೆ ಅವರನ್ನು ರಾತೋರಾತ್ರಿ ಕೋಟ್ಯಧಿಪತಿಯನ್ನಾಗಿಸಿದೆ.
ಅಬುಧಾಬಿ ಮೂಲದ ಕಂಪೆನಿಯಲ್ಲಿ ಕಳೆದ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸಂಜೀವನ್ ಗೆ ಕೋವಿಡ್ ಕಾಲದಲ್ಲಿ ಕೆಲಸ ಬಿಟ್ಟು ತೆರಳುವಂತೆ ಕಂಪೆನಿ ಸೂಚಿಸಿತ್ತು. ಸದ್ಯ ನೋಟಿಸ್ ಪೀರಿಯಡ್ ನಲ್ಲಿರುವ ಸಂಜೀವನ್ ಕೆಲಸಕ್ಕಾಗಿ ಸಂದರ್ಶನ ಮುಗಿಸಿ ಕಾಯುತ್ತಿದ್ದಾಗ ಬಂದ ಫೋನ್ ಕರೆಯೊಂದು ಅವರ ಜೀವನವನ್ನೇ ಬದಲಾಯಿಸಿದೆ. ಆ ಕರೆ ಬಂದಿದ್ದು ದುಬೈ ಡ್ಯೂಟಿ ಫ್ರೀ(ಡಿಡಿಎಫ್) ಲಾಟರಿ ಸಂಸ್ಥೆಯಿಂದ. ಡಿಡಿಎಫ್ ಮಿಲೇನಿಯಂ ಮಿಲಿಯನೇರ್ ಡ್ರಾದಲ್ಲಿ ಸಂಜೀವನ್ 1 ಮಿಲಿಯನ್ ಡಾಲರ್ (7.4 ಕೋ.ರೂ.)ಬಹುಮಾನ ಗೆದ್ದಿದ್ದಾರೆ.
ಕೇರಳದ ಕಾಸರಗೋಡಿಯಲ್ಲಿ ಹುಟ್ಟಿ ಬೆಳೆದಿರುವ ಸಂಜೀವನ್ ಪತ್ನಿ ಹಾಗೂ ಮಗುವಿನ ಜೊತೆ ಅಬುಧಾಬಿಯಲ್ಲಿ ನೆಲೆಸಿದ್ದರು. ನವೆಂಬರ್ 22ರಂದು ಅವರು ಆನ್ ಲೈನ್ ನಲ್ಲಿ ಖರೀದಿಸಿದ್ದ ಲಾಟರಿ ಟಿಕೆಟ್ ಗೆ ಬಹುಮಾನ ಬಂದಿದೆ.
"ನನ್ನ ಪತ್ನಿ ಈಗಲೂ ಕೆಲಸ ಮಾಡುತ್ತಿದ್ದಾಳೆ. ಒಳ್ಳೆಯ ಕೆಲಸ ಸಿಗದಿದ್ದರೆ ಊರಿಗೆ ಹೋಗುವ ಯೋಚನೆ ಮಾಡಿದ್ದೆ. ನಾನು 100,000 ದಿರಾಮ್ಸ್ ಸಾಲ ಮಾಡಿದ್ದೇನೆ. ಈ ಬಹುಮಾನ ಆ ಸಾಲಕ್ಕೆ ಹೋಗಲಿದೆ' ಎಂದು ಸಂಜೀವನ್ 'ಗಲ್ಫ್ ನ್ಯೂಸ್' ಗೆ ತಿಳಿಸಿದ್ದಾರೆ.







