ತನ್ನ ವಿರುದ್ಧ 100 ಕೋಟಿ ರೂ. ನೋಟಿಸ್ ಕಳುಹಿಸಿದ ಟೈಮ್ಸ್ ಗ್ರೂಪ್‌ಗೆ newslaundry.com ಪ್ರತಿಕ್ರಿಯಿಸಿದ್ದು ಹೀಗೆ

ಹೊಸದಿಲ್ಲಿ, ಡಿ.22: ಮಾಧ್ಯಮಗಳ ಕಾರ್ಯವೈಖರಿ ಹಾಗೂ ಧೋರಣೆಗಳನ್ನು ವಿಶ್ಲೇಶಿಸುವ newslaundry.comಗೆ ಟೈಮ್ಸ್ ಮಾಧ್ಯಮ ಸಮೂಹ ಎರಡು ಕಾನೂನಾತ್ಮಕ ನೋಟಿಸ್‌ಗಳನ್ನು ನೀಡಿದೆ. ನ್ಯೂಸ್ ಲಾಂಡ್ರಿಯ ಸುದ್ದಿ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಇಒ ಮತ್ತು ಸಹಸಂಸ್ಥಾಪಕ ಅಭಿನಂದನ್ ಸೇಖ್ರಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಜತೆಗೆ ಈ ನೋಟಿಸ್ ಔಚಿತ್ಯವನ್ನು ಅವರು ಪ್ರಶ್ನಿಸಿದ್ದಾರೆ.
''ನಮ್ಮ ಕೆಲಸ ಮಾಡುತ್ತಿರುವುದಕ್ಕೆ ನಮಗೆ ಎರಡು ನೋಟಿಸ್ ಸಿಕ್ಕಿದೆ. ತಮ್ಮನ್ನು ಯಾರೂ ಮುಟ್ಟುವಂತಿಲ್ಲ ಎಂದು ಭಾವಿಸುವವರ ಚಾನಲ್‌ಗಳ ಅರ್ಥಹೀನ ಪರಂಪರೆ ಇದು" ಎಂದು ಸೇಖ್ರಿ ಲೇವಡಿ ಮಾಡಿದ್ದಾರೆ. ಒಂದು ನೋಟಿಸ್‌ನಲ್ಲಿ 100 ಕೋಟಿ ರೂಪಾಯಿ ಪರಿಹಾರವನ್ನೂ ಕೋರಲಾಗಿದೆ" ಎಂದು ಅವರು ವಿವರಿಸಿದ್ದಾರೆ.
"ವಿಚಿತ್ರವೆಂದರೆ, ಕಾನೂನುಬಾಹಿರವಾಗಿ ಅಥವಾ ಅನೈತಿಕವಾಗಿ ಏನನ್ನೂ ಮಾಡದಿದ್ದರೂ ನಮಗೆ ನೋಟಿಸ್ ಬರುತ್ತಿದೆ. ಟೈಮ್ಸ್ ನೌ ವಾಹಿನಿಯ ಪ್ರೈಮ್ ಟೈಮ್ ಕೇವಲ ಅಸಂಬದ್ಧ, ಅರ್ಥಹೀನ ಕಾರ್ಯಕ್ರಮ ಎಂದು ಸರಿಯಾಗಿಯೇ ಹೇಳಿದ್ದಕ್ಕೆ ಹೀಗೆ ನೋಟಿಸ್ ಕಳಿಸಿದ್ದಾರೆ ಎಂದು ವ್ಯಂಗ್ಯವಾಡಿರುವ ಸೇಖ್ರಿ ಟೈಮ್ಸ್ ನೌ ನ ಪ್ರಮುಖ ಆ್ಯಂಕರ್ ಗಳಾದ ನಾವಿಕ ಕುಮಾರ್ ಹಾಗೂ ರಾಹುಲ್ ಶಿವಶಂಕರ್ ಅವರನ್ನು ಇನ್ನಷ್ಟು ಗೇಲಿ ಮಾಡಿದ್ದಾರೆ. ವಿಶೇಷವೆಂದರೆ ಈ ಹಿಂದಿನ ಕಾರ್ಯಕ್ರಮದಲ್ಲಿ ಇವರಿಬ್ಬರನ್ನು ತಮಾಷೆ ಮಾಡಿದ್ದಕ್ಕೇ ಈ ನೋಟಿಸ್ ಬಂದಿವೆ. ರಾಹುಲ್ ಶಿವ್ ಶಂಕರ್ ರನ್ನು ನ್ಯೂಸ್ ಲಾಂಡ್ರಿ ವಿಶ್ಲೇಕ್ಷಕರು ತಮ್ಮ ಕಾರ್ಯಕ್ರಮಗಳಲ್ಲಿ RSS ಎಂದೇ ಆಗಾಗ ಕರೆಯುತ್ತಾರೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ ಎಂದು ಟೈಮ್ಸ್ ಸಮೂಹದ ಮಾಲಕತ್ವ ಹೊಂದಿರುವ ಬೆನೆಟ್ ಆ್ಯಂಡ್ ಕೋಲ್‌ಮನ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್ ಮಾಡಿರುವ ಟ್ವೀಟನ್ನು ಸೇಖ್ರಿ ಉಲ್ಲೇಖಿಸಿದ್ದಾರೆ.
ನ್ಯೂಸ್‌ಲಾಂಡ್ರಿಯ ಎನ್‌ಎಲ್ ಚೀಟ್‌ಶಿಟ್ ಸರಣಿಯ 'ಎಕ್ಸ್‌ಪ್ಲೈನ್ಡ್: ಹೌ ಟೂ ರಿಗ್ ಟಿಆರ್‌ಪಿಸ್' ಎಂಬ ಕಾರ್ಯಕ್ರಮಕ್ಕಾಗಿ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ ನೀಡಲಾಗಿದ್ದು, ಈ ಸಂಚಿಕೆಗೆ ಕೆಲಸ ಮಾಡಿದ ಪ್ರತಿಯೊಬ್ಬರನ್ನೂ ನೋಟಿಸ್‌ನಲ್ಲಿ ಹೆಸರಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸೇಖ್ರಿ, "ಅತಿದೊಡ್ಡ ಮಾಧ್ಯಮ ಸಂಸ್ಥೆ ಮತ್ತು ಖ್ಯಾತ ಪತ್ರಕರ್ತರು ಮುಂದುವರಿಯಿರಿ; ನಿಮಗೆ ಏನು ಸಾಧ್ಯವೋ ಅದನ್ನು ಮಾಡಿ. ಪ್ರಸಿದ್ಧ ಪತ್ರಕರ್ತರೊಬ್ಬರ ಮಾತಿನಲ್ಲಿ ಹೇಳುವುದಾದರೆ, ಪತ್ರಿಕೋದ್ಯಮವನ್ನು ಅಣಕಿಸುವವರು ನ್ಯಾಯಾಲಯದಲ್ಲಿ ದಾವೆ ಹೂಡುವುದಾದರೆ ಹೂಡಲಿ; ಎಲ್ಲ ಬಿ-ಗ್ರೇಡರ್‌ಗಳು ಒಟ್ಟಾಗಲಿ; ಆದರೆ ನ್ಯೂಸ್‌ಲಾಂಡ್ರಿ ಗ್ರಾಹಕರು ಮಾತ್ರ ಸತ್ಯವನ್ನು ಬೆಂಬಲಿಸುತ್ತಾರೆ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಟೈಮ್ಸ್ ಗ್ರೂಪ್ ನೋಟಿಸ್ ಗೆ ತಿರುಗೇಟು ನೀಡಿದ newslaundry ಯ ಆ ಕಾರ್ಯಕ್ರಮದ ವಿಡಿಯೋ ಇಲ್ಲಿ ನೋಡಿ







