ಅಲಿಗಢ ಮುಸ್ಲಿಂ ಯುನಿವರ್ಸಿಟಿ ಮಿನಿ ಭಾರತವಿದ್ದಂತೆ: ಪ್ರಧಾನಿ ಮೋದಿ

ಹೊಸದಿಲ್ಲಿ,ಡಿ.22: ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಡಬಹುದು, ಆದರೆ ಭಾರತದ ಅಭಿವೃದ್ಧಿಯು ಕಾಯುವುದಿಲ್ಲ ಮತ್ತು ಅಭಿವೃದ್ಧಿಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು.
ಅಲಿಗಡ ಮುಸ್ಲಿಂ ವಿವಿ (ಅಮು)ಯ ಶತಮಾನೋತ್ಸವ ಸಮಾರಂಭದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಮುಖ್ಯ ಭಾಷಣವನ್ನು ಮಾಡಿದ ಅವರು,ನಕಾರಾತ್ಮಕತೆಯನ್ನು ನೋಡುವ ಜನರು ಎಲ್ಲ ಕಡೆಯೂ ಕಂಡುಬರುತ್ತಿದ್ದಾರೆ ಎಂದರು. ಆ ಬಗ್ಗೆ ಹೆಚ್ಚು ಅವರು ವಿವರಿಸಲಿಲ್ಲ.
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸುವುದು ಮುಖ್ಯವಾಗಿದೆ ಮತ್ತು ವ್ಯಕ್ತಿ ಯಾವುದೇ ಧರ್ಮದಲ್ಲಿ ಜನಿಸಿರಲಿ,ತನ್ನ ಆಕಾಂಕ್ಷೆಗಳನ್ನು ರಾಜಕೀಯ ಗುರಿಗಳೊಂದಿಗೆ ಮೇಳೈಸುವುದು ಮುಖ್ಯವಾಗಿದೆ. ರಾಷ್ಟ್ರದ ವಿಷಯದಲ್ಲಿ ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲ. ಅಮು ಹಲವಾರು ಸ್ವಾತಂತ್ರ ಹೋರಾಟಗಾರರನ್ನು ನೀಡಿದೆ ಮತ್ತು ಅವರೆಲ್ಲ ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಹೋರಾಡಿದ್ದರು ಎಂದರು.
ಅಮು ದೇಶದ ಅತ್ಯಂತ ಹಳೆಯ ವಿವಿಗಳಲ್ಲೊಂದಾಗಿದೆ. 1964ರಲ್ಲಿ ಲಾಲ್ ಬಹಾದೂರ್ ಶಾಸ್ತ್ರಿ ಅವರು ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣವನ್ನು ಮಾಡಿದಾಗಿನಿಂದ ಮೋದಿ ವಿವಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಮೊದಲ ಪ್ರಧಾನಿಯಾಗಿದ್ದಾರೆ.
ಭಾರತೀಯರು,ಅವರು ಯಾವುದೇ ಧರ್ಮಕ್ಕೆ ಸೇರಿದ್ದರೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಸಮಾನ ಅವಕಾಶಗಳನ್ನು ಹೊಂದಿದ್ದಾರೆ ಎಂದು ಒತ್ತಿ ಹೇಳಿದ ಮೋದಿ,ತಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ತಮ್ಮ ಭವಿಷ್ಯದ ಬಗ್ಗೆ ಪ್ರತಿಯೊಬ್ಬ ಪ್ರಜೆಯಲ್ಲಿಯೂ ವಿಶ್ವಾಸವನ್ನು ಮೂಡಿಸುವ ನಿಟ್ಟಿನಲ್ಲಿ ದೇಶವು ಸಾಗುತ್ತಿದೆ. ಯಾವುದೇ ಪ್ರಜೆಯು ತನ್ನ ಧರ್ಮದಿಂದಾಗಿ ಹಿಂದುಳಿಯಬಾರದು ಮತ್ತು ತಮ್ಮ ಆಕಾಂಕ್ಷೆಗಳನ್ನು ಈಡೇರಿಸಲು ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳಿರಬೇಕು. ಇಂತಹ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ದೇಶವು ಮುನ್ನಡೆಯುತ್ತಿದೆ ಎಂದರು.
ಅಮುದಿಂದ ಹೊರಬಂದಿರುವ ಹಳೆಯ ವಿದ್ಯಾರ್ಥಿಗಳು ಇಂದು ವಿಶ್ವಾದ್ಯಂತ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದಾರೆ ಎಂದ ಅವರು ಜನರಿಗೆ ಉಚಿತ ಪರೀಕ್ಷೆಗಳನ್ನು ನಡೆಸುವ,ಐಸೊಲೇಷನ್ ವಾರ್ಡ್‌ಗಳನ್ನು ನಿರ್ಮಿಸುವ ಮತ್ತು ಪಿಎಂ ಕೇರ್ಸ್ ನಿಧಿಗೆ ಬೃಹತ್ ಮೊತ್ತವನ್ನು ದೇಣಿಗೆಯಾಗಿ ನೀಡುವ ಮೂಲಕ ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಅಮುವಿನ ಪಾತ್ರವನ್ನು ಪ್ರಶಂಸಿಸಿದರು. ಇದು ಸಮಾಜಕ್ಕೆ ತನ್ನ ಬದ್ಧತೆಗಳನ್ನು ಈಡೇರಿಸುವ ವಿವಿಯ ಗಂಭೀರತೆಯನ್ನು ತೋರಿಸುತ್ತಿದೆ ಎಂದರು.
ಕಳೆದ ಒಂದು ನೂರು ವರ್ಷಗಳಲ್ಲಿ ವಿಶ್ವದ ಹಲವಾರು ದೇಶಗಳೊಂದಿಗೆ ಭಾರತದ ಸಂಬಂಧಗಳನ್ನು ಬಲಗೊಳಿಸುವಲ್ಲಿ ಅಮು ನೆರವಾಗಿದೆ ಎಂದ ಮೋದಿ, ಅರೆಬಿಕ್,ಉರ್ದು ಮತ್ತು ಪರ್ಷಿಯನ್ ಭಾಷೆಗಳು ಹಾಗೂ ಇಸ್ಲಾಮಿಕ್ ಸಾಹಿತ್ಯದ ಕುರಿತು ವಿವಿಯಲ್ಲಿ ನಡೆಸಲಾದ ಸಂಶೋಧನೆಗಳು ಇಡೀ ಇಸ್ಲಾಮಿಕ್ ಜಗತ್ತಿನೊಂದಿಗೆ ಭಾರತದ ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಶಕ್ತಿಯನ್ನು ನೀಡಿವೆ ಎಂದರು. ಅಂತರ್‌ಶಾಸ್ತ್ರೀಯ ಶಿಕ್ಷಣವನ್ನು ಉತ್ತೇಜಿಸುತ್ತಿರುವುದಕ್ಕಾಗಿ ವಿವಿಯನ್ನು ಪ್ರಶಂಸಿಸಿದ ಅವರು, ‘ಅಮು ಮಿನಿ ಭಾರತವನ್ನು ಪ್ರತಿನಿಧಿಸುತ್ತಿದೆ. ಅಮು ಕ್ಯಾಂಪಸ್ ಒಂದು ನಗರವಿದ್ದಂತೆ ಎಂದು ಜನರು ಹೇಳುತ್ತಾರೆ. ವಿವಿಧ ವಿಭಾಗಗಳು, ಡಝನ್‌ಗಟ್ಟಲೆ ಹಾಸ್ಟೆಲ್‌ಗಳು,ಸಾವಿರಾರು ಶಿಕ್ಷಕರು ಮತ್ತು ಪ್ರೊಫೆಸರ್‌ಗಳ ನಡುವೆ ಮಿನಿ ಭಾರತವನ್ನು ನಾವಿಲ್ಲಿ ನೋಡುತ್ತಿದ್ದೇವೆ. ಇಲ್ಲಿ ನಾವು ನೋಡುತ್ತಿರುವ ವೈವಿಧ್ಯವು ವಿವಿಯ ಮಾತ್ರವಲ್ಲ,ಇಡೀ ದೇಶದ ಶಕ್ತಿಯಾಗಿದೆ ’ಎಂದರು.







