"ಕಾಮ್ರಾ, ರಚಿತಾ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಅನುಮತಿಸಿ ಅಟಾರ್ನಿ ಜನರಲ್ ತಪ್ಪು ಮಾಡಿದ್ದಾರೆ"
ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ
ಕುನಾಲ್ ಕಾಮ್ರಾ
ಹೊಸದಿಲ್ಲಿ: ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಧೀಶರುಗಳ ಕುರಿತಂತೆ ಮಾಡಿದ ಟ್ವೀಟ್ಗಳಿಗೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಿ ಈಗಿನ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ತಪ್ಪು ಮಾಡಿದ್ದಾರೆ ಎಂದು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಹೇಳಿದ್ದಾರೆ. ವ್ಯಂಗ್ಯಚಿತ್ರ ಕಲಾವಿದೆ ರಚಿತಾ ತನೇಜಾ ಅವರ ಕಾರ್ಟೂನ್ಗಳಿಗಾಗಿ ಅವರ ವಿರುದ್ಧವೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಿ ವೇಣುಗೋಪಾಲ್ ಅವರು ಎರಡನೇ ತಪ್ಪು ಮಾಡಿದ್ದಾರೆಂದು ರೋಹಟ್ಗಿ ಹೇಳಿದ್ದಾರೆ.
"ಅಟಾರ್ನಿ ಜನರಲ್ ಅನುಮತಿ ನೀಡಬಾರದಾಗಿತ್ತು,'' ಎಂದು 'thewire.in'ಗಾಗಿ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ರೋಹಟ್ಗಿ ಹೇಳಿದರಲ್ಲದೆ "ಜನರಿಗೆ ತಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳುವ ಹಕ್ಕಿದೆ,'' ಎಂದರು.
"ಈ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಪ್ರಾಮುಖ್ಯತೆಗೆ ಅರ್ಹವಲ್ಲದ ವಿಚಾರಗಳಿಗೆ ಮಹತ್ವ ನೀಡಲಾಗುತ್ತಿದೆ,'' ಎಂದೂ ಅವರು ಹೇಳಿದರು.
"ನಾನು ಕಾಮ್ರಾ ಅವರ ಟ್ವೀಟ್ಗಳನ್ನು ನೋಡಿದ್ದೇನೆ. ನಾನು ಕೂಡ ಅಟಾರ್ನಿ ಜನರಲ್ ಆಗಿದ್ದವನು. ಕಾಮ್ರಾ ಅವರ ಟ್ವೀಟ್ಗಳು ಕೆಟ್ಟ ಅಭಿರುಚಿಯಿಂದ ಕೂಡಿರಬಹುದು ಆದರೆ ಅದು ನ್ಯಾಯಂಗ ನಿಂದನೆಯಲ್ಲ. ಇದೊಂದು ತೀರ ಚಿಕ್ಕ ವಿಚಾರ,'' ಎಂದು ರೋಹಟ್ಗಿ ಹೇಳಿದರು.
ರಚಿತಾ ತನೇಜಾ ಅವರ ಕಾರ್ಟೂನ್ಗಳ ಬಗ್ಗೆ ಉಲ್ಲೇಖಿಸಿದ ರೋಹಟ್ಗಿ, "ಅವುಗಳು ನ್ಯಾಯಾಂಗ ನಿಂದನೆಯಲ್ಲ, ಬದಲು ಕೇವಲ ವಿಡಂಬನೆ,'' ಎಂದರು.