ವಯಸ್ಕ ಮಹಿಳೆ ವಿವಾಹದ ನಂತರ ಸ್ವಇಚ್ಛೆಯಿಂದ ಮತಾಂತರಗೊಂಡರೆ ನ್ಯಾಯಾಲಯದ ಹಸ್ತಕ್ಷೇಪವಿಲ್ಲ: ಹೈಕೋರ್ಟ್

ಕೊಲ್ಕತ್ತಾ: ವಯಸ್ಕ ಮಹಿಳೆಯೊಬ್ಬಳು ವಿವಾಹವಾದ ನಂತರ ಸ್ವಇಚ್ಛೆಯಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಂಡಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ನಡೆಸುವಂತಿಲ್ಲ ಎಂದು ಕೊಲ್ಕತ್ತಾ ಹೈಕೋರ್ಟ್ ಸೋಮವಾರ ಪುನರುಚ್ಛರಿಸಿದೆ.
ನಾಪತ್ತೆಯಾಗಿರುವ ತನ್ನ 19 ವರ್ಷದ ಪುತ್ರಿಯನ್ನು ಪತ್ತೆ ಹಚ್ಚುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅಪೀಲಿನ ಮೇಲೆ ವಿಚಾರಣೆ ನಡೆಸಿದ ಜಸ್ಟಿಸ್ ಸಂಜಿಬ್ ಬ್ಯಾನರ್ಜಿ ಹಾಗೂ ಜಸ್ಡಿಸ್ ಅರಿಜಿತ್ ಬ್ಯಾನರ್ಜಿ ಅವರ ಪೀಠ ಮೇಲಿನಂತೆ ಹೇಳಿದೆ.
ಈ ನಿರ್ದಿಷ್ಟ ಪ್ರಕರಣದಲ್ಲಿ ನಾಪತ್ತೆಯಾದ ಯುವತಿ ಪತ್ತೆಯಾದಾಗ ಆಕೆ ವಿವಾಹಿತಳಾಗಿದ್ದಳಲ್ಲದೆ ತನ್ನ ಪತಿಯ ಧರ್ಮಕ್ಕೆ ಮತಾಂತರಗೊಂಡಿದ್ದಳು. ತಾನು ಸ್ವಇಚ್ಛೆಯಿಂದ ಹೀಗೆ ಮಾಡಿದ್ದಾಗಿ ಹಾಗೂ ಹೆತ್ತವರ ಮನೆಗೆ ವಾಪಸಾಗಲು ಇಚ್ಛಿಸುತ್ತಿಲ್ಲ ಎಂದು ಆಕೆ ಪೊಲೀಸರೆದುರು ಹೇಳಿಕೆ ನೀಡಿದ್ದಳು.
"ಆಕೆಗೆ 19 ವರ್ಷ ವಯಸ್ಸು. ಆಕೆ ತನಗಿಷ್ಟವಾದ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ ಹಾಗೂ ಆಕೆಗೆ ತನ್ನ ಹೆತ್ತವರ ಮನೆಗೆ ಮರಳಲು ಇಚ್ಛೆಯಿಲ್ಲ ಎಂದು ತಿಳಿಯುತ್ತದೆ. ವಯಸ್ಕ ಮಹಿಳೆಯೊಬ್ಬಳು ಆಕೆಯ ಇಚ್ಛೆಯಂತೆ ವಿವಾಹವಾಗಿ ನಂತರ ಮತಾಂತರಗೊಳ್ಳಲು ನಿರ್ಧರಿಸಿ ಹಾಗೂ ಹೆತ್ತವರ ಮನೆಗೆ ವಾಪಸಾಗದೇ ಇರಲು ನಿರ್ಧರಿಸಿದರೆ ಈ ವಿಚಾರದಲ್ಲಿ ಹಸ್ತಕ್ಷೇಪ ನಡೆಸುವ ಹಾಗಿಲ್ಲ,'' ಎಂದು ಕೋರ್ಟ್ ಸ್ಪಷ್ಟ ಪಡಿಸಿದೆ.
ಆದರೆ ಆಕೆ ಒತ್ತಡಕ್ಕೊಳಗಾಗಿ ಹೇಳಿಕೆ ನೀಡಿರಬಹುದು ಎಂದು ಆಕೆಯ ತಂದೆ ಶಂಕೆ ವ್ಯಕ್ತಪಡಿಸಿದ್ದರಿಂದ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ ಎರಡನೇ ಹೇಳಿಕೆ ನೀಡಿ ತಾನು ಯಾರದ್ದೇ ಒತ್ತಡ ಅಥವಾ ಪ್ರಭಾವಕ್ಕೊಳಗಾಗಿಲ್ಲ ಎಂದು ತಿಳಿಸಿದರೂ ಆಕೆಯ ತಂದೆಗೆ ಇದರಿಂದ ಸಮಾಧಾನವಾಗಿಲ್ಲ ಎನ್ನಲಾಗಿದೆ.
"ಸ್ಪಷ್ಟ ವರದಿ ನೀಡಿದ ನಂತರವೂ ತಂದೆಗೆ ಸಂದೇಹವಿದೆ,'' ಎಂದು ಹೇಳಿದ ನ್ಯಾಯಾಲಯ ಅದೇ ಸಮಯ "ಈ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ನಡೆಸುವಂತಿಲ್ಲ" ಎಂದು ತಿಳಿಸಿದೆ.
ತಂದೆಯ ಸಂದೇಹವನ್ನು ದೂರ ಮಾಡುವ ಸಲುವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಾಯ್ಬುಲ್ ಬಾಪುಲಿ ಅವರು ಈ ಕುರಿತು ನ್ಯಾಯಾಲಯಕ್ಕೆ ಡಿಸೆಂಬರ್ 24ರಂದು ವರದಿ ಸಲ್ಲಿಸುವಂತಾಗಲು ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗುವಂತೆ ಯುವತಿಗೆ ಸೂಚಿಸಲಾಗಿದೆ.







