ಬಿಜೆಪಿ ಸೇರಿದ ಮಾಜಿ ನಾಯಕನನ್ನು ಯುವ ಘಟಕ ಪದಾಧಿಕಾರಿಯಾಗಿ ಆರಿಸಿ ಪೇಚಿಗೀಡಾದ ಕಾಂಗ್ರೆಸ್

ಭೋಪಾಲ್: ಈ ವರ್ಷದ ಮಾರ್ಚ್ ತಿಂಗಳಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಜತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಾಗೂ ಈಗ ಬಿಜೆಪಿ ನಾಯಕನಾಗಿರುವ ಹರ್ಷಿತ್ ಸಿಂಘೈ ಎಂಬವರನ್ನು ಮಧ್ಯ ಪ್ರದೇಶದ ತನ್ನ ಯುವ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿ ಕಾಂಗ್ರೆಸ್ ಪೇಚಿಗೀಡಾಗಿದೆ. ಸಿಂಘೈ ಆಯ್ಕೆಯನ್ನು ಈಗ ರದ್ದು ಪಡಿಸಲಾಗಿದೆಯಾದರೂ ಪಕ್ಷ ತಳ ಮಟ್ಟದ ಜತೆ ಸಂಪರ್ಕವನ್ನು ಹೊಂದಿಲ್ಲದೇ ಇರುವುದನ್ನು ಈ ವಿದ್ಯಮಾನ ಸಾಬೀತು ಪಡಿಸಿದೆ ಎಂದು ಪಕ್ಷದ ಟೀಕಾಕಾರರು ಹೇಳುತ್ತಿದ್ದಾರೆ.
ಜಬಲ್ಪುರ್ ಕಾಂಗ್ರೆಸ್ ಘಟಕದಲ್ಲಿ ದೊರೆತ 'ಹೊಸ ಹುದ್ದೆ'ಗಾಗಿ ಅಭಿನಂದನೆ ಸಲ್ಲಿಸಿ ಹಲವರಿಂದ ಸಿಂಘೈ ಅವರಿಗೆ ಕಳೆದ ಶುಕ್ರವಾರ ಸಂದೇಶಗಳು ಆಗಮಿಸಿದಾಗ ಅಚ್ಚರಿ ಪಡುವ ಸರದಿ ಅವರದ್ದಾಗಿತ್ತು. ಅವರು ಮಾರ್ಚ್ ತಿಂಗಳಲ್ಲಿಯೇ ಕಾಂಗ್ರೆಸ್ ತೊರೆದಿದ್ದರೂ ಈ ಒಂಬತ್ತು ತಿಂಗಳ ಅವಧಿಯಲ್ಲಿ ಅದು ಪಕ್ಷದ ದಾಖಲೆಗಳಲ್ಲಿ ಪ್ರತಿಫಲಿತವಾಗಿರಲಿಲ್ಲ. ಯುವ ಕಾಂಗ್ರೆಸ್ ಚುನಾವಣೆಗಳು ಶುಕ್ರವಾರ ಮುಗಿದಾಗ ಸಿಂಘೈ ಅವರು 12 ಮತಗಳಿಂದ ಗೆದ್ದಿದ್ದರು ಎಂದು ತಿಳಿಸಲಾಗಿತ್ತು.
ತಾನು ಯುವ ಕಾಂಗ್ರೆಸ್ ಚುನಾವಣೆಗೆ ಮೂರು ವರ್ಷಗಳ ಹಿಂದೆ ನಾಮಪತ್ರ ಸಲ್ಲಿಸಿದ್ದಾಗಿ ಹಾಗೂ ಚುನಾವಣೆಗಳು ಮುಂದೂಡುತ್ತಲೇ ಹೋಗಿದ್ದನ್ನು ಸಿಂಘೈ ನೆನಪಿಸಿಕೊಂಡಿದ್ದಾರೆ. ಮೊದಲು ಮಧ್ಯ ಪ್ರದೇಶ ಚುನಾವಣೆ ಹಾಗೂ ನಂತರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಚುನಾವಣೆ ಮುಂದೂಡಲಾಗಿತ್ತು ಎಂದು ಅವರು ಹೇಳಿದರು.





