ಬೇಟೆಗೆ ತೆರಳಿದ್ದ ವ್ಯಕ್ತಿ ಸಹ ಬೇಟೆಗಾರನ ಗುಂಡೇಟಿಗೆ ಬಲಿ

ಎ.ಬೆಳ್ಯಪ್ಪ- ಕೆ.ಪರಮೇಶ್ವರ್
ಮಡಿಕೇರಿ, ಡಿ.22: ಬೇಟೆಗೆ ಹೋಗಿದ್ದ ಸಂದರ್ಭ ಸಹ ಬೇಟೆಗಾರನ ಬಂದೂಕಿನಿಂದ ಸಿಡಿದ ಗುಂಡಿಗೆ ಸಂಶಯಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಮದೆನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಕೆ.ಪರಮೇಶ್ವರ್ ಅಲಿಯಾಸ್ ಕಿರಣ್(31) ಮೃತ ವ್ಯಕ್ತಿ. ಆರೋಪಿ ಎ.ಬೆಳ್ಯಪ್ಪ ಅಲಿಯಾಸ್ ಸತೀಶ್ ಎಂಬಾತನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಕೀರ್ತನ್ ಇದೊಂದು ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಪರಮೇಶ್ವರ್ ಹಾಗೂ ಬೆಳ್ಯಪ್ಪ ಅವರು ಒಂದೇ ಗ್ರಾಮದ ನಿವಾಸಿಗಳಾಗಿದ್ದು, ಸೋಮವಾರ ರಾತ್ರಿ ಇವರಿಬ್ಬರು ಜೊತೆಯಾಗಿ ಬೇಟೆಗೆ ತೆರಳಿದ್ದರು. ಊರಿನಿಂದ ತೀರಾ ಒಳಭಾಗದ ಕಾಡು ಪ್ರದೇಶದಲ್ಲಿ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಬೆಳ್ಯಪ್ಪ ಹಾರಿಸಿದ ಗುಂಡು ಪರಮೇಶ್ವರನ ತಲೆಯ ಭಾಗಕ್ಕೆ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿದರು.







