ಸೈಬರ್ ಅಪರಾಧ ಕುರಿತ ಮಾಹಿತಿ ಕಾರ್ಯಕ್ರಮ
ಉಡುಪಿ, ಡಿ.22: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಮಹಿಳಾ ಕೋಶದ ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗಾಗಿ ಸೈಬರ್ ಅಪರಾಧ ಮಾಹಿತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕ ರಾಮಚಂದ್ರ ನಾಯಕ್ ಸೈಬರ್ ಅಪರಾಧಗಳ ಬಗ್ಗೆ ಮಹಿತಿ ನೀಡಿದರು. ಹಣಕಾಸಿನ ಅಪರಾಧಗಳು, ಪೇಸ್‌ಬುಕ್ ಮತ್ತು ವಾಟ್ಸಾಪ್ ಗಳಲ್ಲಿನ ಅಪರಾಧಗಳು, ಸಾಲ ಹಾಗೂ ಉದ್ಯೋಗದ ಹೆಸರಿನ ಅಪರಾಧ ಗಳು, ಆನ್‌ಲೈನ್ ಮೂಲಕ ಉಡುಗೊರೆ ನೀಡುವ ಹೆಸರಿನಲ್ಲಿ ವಂಚನೆ, ಬ್ಯಾಂಕಿಂಗ್ ಅಪರಾಧಗಳು, ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ನಡೆಸುವ ವಂಚನೆಗಳನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್‌ಎಸ್‌ಎಸ್ ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಗೂಗಲ್ ಮೀಟ್‌ನ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಅನುಪಮಾ ಜೋಗಿ ಸ್ವಾಗತಿಸಿ, ಮೆಲ್ಸನ್ ಡಿಸೋಜ ವಂದಿಸಿ, ಮಹಿಳಾ ಕೋಶದ ಸಂಯೋಜಕಿ ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು.





