ಉ.ಪ್ರ.ಗ್ರಾ.ಪಂ.ಚುನಾವಣೆಗಳಲ್ಲಿ ಭೀಮ್ ಆರ್ಮಿ ಸ್ಪರ್ಧೆ: ಆಝಾದ್

ಅಜಮ್‌ಗಡ,ಡಿ.22: ಉತ್ತರ ಪ್ರದೇಶದಲ್ಲಿ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ತನ್ನ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರು ಮಂಗಳವಾರ ಇಲ್ಲಿ ತಿಳಿಸಿದರು.
ಸರಕಾರವು ಪ್ರತಿಪಕ್ಷಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು,ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಇತ್ತೀಚಿಗೆ ಕೊಲೆಯಾದ ದಲಿತ ಗ್ರಾಮ ಮುಖ್ಯಸ್ಥ ಸತ್ಯಮೇವ ಅವರಿಗೆ ನೆರವು ವಿಳಂಬವಾಗಿತ್ತು ಎಂಬ ಆರೋಪದ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದ ಆಝಾದ್,ಕಳಪೆ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಬಗ್ಗೆ ಅವರಿಗೆ ತಿಳಿಸಿದ್ದೇವೆ ಮತ್ತು ಸತ್ಯಮೇವ ಹತ್ಯೆ ಪ್ರಕರಣದ ಕುರಿತು ಚರ್ಚಿಸಿದ್ದೇನೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಭೇಟಿಗೆ ಮುನ್ನ ಆಝಾದ್ ಮತ್ತು ಪೊಲೀಸರ ನಡುವೆ ಬಿರುಸಿನ ವಾಗ್ವಾದ ನಡೆದಿತ್ತು. ಪ್ರಜಾಪ್ರಭುತ್ವದಲ್ಲಿ ಜನರಿಗೆ ಗೌರವ ನೀಡಬೇಕು. ಅಧಿಕಾರಿಗಳು ಜನರಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಎನ್ನುವುದನ್ನು ಅವರು ಇಲ್ಲಿ ತನ್ನೊಂದಿಗೆ ನಡೆದುಕೊಂಡ ರೀತಿಯು ಸಾಬೀತುಗೊಳಿಸಿದೆ ಎಂದು ಆಝಾದ್ ತಿಳಿಸಿದರು.





