ಫೆಬ್ರವರಿ ಅಂತ್ಯದವರೆಗೆ ಸಿಬಿಎಸ್‌ಇ 10,12ನೇ ತರಗತಿಗೆ ಪರೀಕ್ಷೆ ಇಲ್ಲ: ಕೇಂದ್ರ ಶಿಕ್ಷಣ ಸಚಿವ

ಚಂಡಿಗಢ, ಡಿ. 22: ಸಿಬಿಎಸ್‌ಇ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿ ಅಂತ್ಯದ ವರೆಗೆ ಆಯೋಜಿಸುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಮಂಗಳವಾರ ಶಿಕ್ಷಕರೊಂದಿಗಿನ ಸಂವಹನ ನಡೆಸುವ ಸಂದರ್ಭ ಹೇಳಿದ್ದಾರೆ.
‘‘ಸಿಬಿಎಸ್‌ಇ ಮಂಡಳಿಯ 10 ಹಾಗೂ 12ನೇ ತರಗತಿ ಪರೀಕ್ಷೆಯನ್ನು ಮುಂದೂಡುವಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ನಾನು ಬಹಳಷ್ಟು ವಿನಂತಿಗಳನ್ನು ಸ್ವೀಕರಿಸಿದ್ದೇನೆ. ಕೊರೋನ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿರಿಸಿ, ಮಂಡಳಿ ಪರೀಕ್ಷೆಯನ್ನು ಫೆಬ್ರವರಿಯಲ್ಲಿ ನಡೆಸದಿರಲು ನಾವು ನಿರ್ಧರಿಸಿದ್ದೇವೆ’’ ಎಂದು ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ. ಮಂಡಳಿ ಪರೀಕ್ಷೆಯನ್ನು ಅನಂತರ ನಡೆಸಲಾಗುವುದು ಎಂದು ಅವರು ಹೇಳಿದರು. ಆದರೆ, ಪರೀಕ್ಷೆಯ ದಿನಾಂಕವನ್ನು ಶೀಘ್ರವಾಗಿ ಘೋಷಿಸಲಾಗುವುದು ಎಂಬ ಹೇಳುವ ಸಂದರ್ಭ ದಿನಾಂಕದ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ.
ಹಲವು ಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇರುವುದರಿಂದ ಮಂಡಳಿ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸುವಂತಿಲ್ಲ. ಆದುದರಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಅವರು ಹೇಳಿದರು. ‘‘ಕಡಿತಗೊಳಿಸಿದ ಪಠ್ಯಕ್ರಮದ ಮೇಲೆ ಸಿಬಿಎಸ್‌ಇ ಮಂಡಳಿ ಪರೀಕ್ಷೆ ನಡೆಸಲಿದೆ. ಒಟ್ಟು ಪಠ್ಯ ಕ್ರಮದಲ್ಲಿ ಶೇ. 30 ಪಠ್ಯವನ್ನು ಕಡಿತಗೊಳಿಸಲಾಗಿದೆ. ಕೆಲವು ರಾಜ್ಯಗಳು ಇದಕ್ಕಿಂತಲೂ ಹೆಚ್ಚು ಪಠ್ಯವನ್ನು ಕಡಿತಗೊಳಿಸಿ ಘೋಷಿಸಿದೆ. ಇನ್ನು ಕೆಲವು ರಾಜ್ಯಗಳು ಇನ್ನಷ್ಟೇ ಪ್ರಕಟನೆ ನೀಡಬೇಕಾಗಿದೆ. ಇದಲ್ಲದೆ, ಪರೀಕ್ಷೆಯಲ್ಲಿ ಶೇ. 33 ಆಂತರಿಕ ಆಯ್ಕೆ ಇರಲಿದೆ’’ ಎಂದು ಸಚಿವರು ಸಂಬಂಧಿತರೊಂದಿಗಿನ ಆನ್‌ಲೈನ್ ಸಂವಹನದ ಸಂದರ್ಭ ಹೇಳಿದರು. ‘‘ವಿದ್ಯಾರ್ಥಿಗಳ ಮೇಲೆ ಕೊರೋನ ಪರಿಣಾಮ ಬೀರಲು ನಾವು ಅವಕಾಶ ನೀಡಲಾರೆವು. ಯಾವುದೇ ಪರೀಕ್ಷೆ ಎದುರಿಸದೆ ಉತ್ತೀರ್ಣರೆಂದು ಘೋಷಿಸಲಾದ ವಿದ್ಯಾರ್ಥಿಗಳನ್ನು ಕೊರೋನ ಕಾಲದ ವಿದ್ಯಾರ್ಥಿಗಳು ಎಂದು ಕರೆಯಲಾಗುವುದು. ಜೆಇಇ, ನೀಟ್ ಪರೀಕ್ಷೆಯನ್ನು ನಾವು ಈ ವರ್ಷ ನಡೆಸಿದ್ದೇವೆ. ಕೊರೋನ ಸಾಂಕ್ರಾಮಿಕ ರೋಗದ ನಡುವೆ ನಾವು ನಡೆಸಿದ ಅತಿ ದೊಡ್ಡ ಪರೀಕ್ಷೆಯಲ್ಲಿ ಇದು ಕೂಡ ಒಂದು’’ ಎಂದು ಶಿಕ್ಷಕರೊಬ್ಬರ ಪ್ರಶ್ನೆಗೆ ರಮೇಶ್ ಪೋಖ್ರಿಯಾಲ್ ಪ್ರತಿಕ್ರಿಯಿಸಿದರು.







