ಶಾಲೆ ಆರಂಭ ಕುರಿತು ತಾಂತ್ರಿಕ ಸಲಹಾ ಸಮಿತಿ ವರದಿಯಂತೆ ಕ್ರಮ: ಡಾ.ಕೆ.ಸುಧಾಕರ್

ಬೆಂಗಳೂರು, ಡಿ.22: ರಾಜ್ಯದಲ್ಲಿ ಜನವರಿ 1ರಿಂದ ಶಾಲೆಗಳನ್ನು ಆರಂಭಿಸಬೇಕೆ ಅಥವಾ ಬೇಡವೆ ಎಂಬುದರ ಕುರಿತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಕೇಳಲಾಗಿದೆ. ಅವರು ನೀಡುವ ವರದಿಯನ್ನು ಆಧರಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯಕ್ಕೆ ಲಾಕ್‍ಡೌನ್ ಅಥವಾ ರಾತ್ರಿ ಕರ್ಫ್ಯೂ ವಿಧಿಸುವ ಬಗ್ಗೆ ಯಾವುದೆ ಆಲೋಚನೆ ಮಾಡಲಾಗಿಲ್ಲ. ನಮಗೆ ಜನರ ಆರೋಗ್ಯ ಮುಖ್ಯ. ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯವು ರಾತ್ರಿ ಕರ್ಫ್ಯೂವನ್ನು ವಿಧಿಸುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಿರುವುದರಿಂದ, ಈ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ ಎಂದರು.
ಕೋವಿಡ್ ನೆಗೆಟಿವ್ ವರದಿಯಿಲ್ಲದೆ ಯು.ಕೆ.ಯಿಂದ ಕರ್ನಾಟಕಕ್ಕೆ ಬಂದಿರುವ 138 ಮಂದಿ ಪ್ರಯಾಣಿಕರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ, ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಸಿದ್ದು, ವರದಿ ಬರಬೇಕಿದೆ. ಒಂದು ವೇಳೆ ಈ ಪೈಕಿ ಯಾರಿಗಾದರೂ ಕೋವಿಡ್ ಪಾಸಿಟಿವ್ ಬಂದಲ್ಲಿ, ಅವರನ್ನು ಜೆನೆಸಿಸ್ ಪರೀಕ್ಷೆಗೊಳಪಡಿಸಿ, ರೂಪಾಂತರಗೊಂಡಿರುವ ಕೊರೋನ ವೈರಸ್ ಬಗ್ಗೆ ಅಗತ್ಯ ಮಾಹಿತಿ ಕಲೆ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸುಧಾಕರ್ ಹೇಳಿದರು.





