ಸರ, ಬೈಕ್ ಕಳವು: ಮೂವರ ಬಂಧನ

ಮಂಗಳೂರು, ಡಿ.22: ಸರ ಮತ್ತು ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೆರ್ಮನ್ನೂರು ಚೆಂಬುಗುಡ್ಡೆ ನಿವಾಸಿ ಹಬೀಬ್ ಹಸನ್ (39), ಬಿ.ಸಿ.ರೋಡ್ ಪಲ್ಲಮಜಲು ನಿವಾಸಿ ಅಬ್ದುಲ್ ಮನ್ನಾನ್ (32) ಮತ್ತು ಉಡುಪಿಯ ಅಲಂಕಾರು ನಿವಾಸಿ ಮುಹಮ್ಮದ್ ತೌಸಿಫ್ (28) ಬಂಧಿತ ಆರೋಪಿಗಳು.
ಪ್ರಕರಣ ವಿವರ: ಪಡುಪಣಂಬೂರು ಪರಿಸರದಲ್ಲಿ ಡಿ.9ರಂದು ಮಧ್ಯಾಹ್ನ 3:30ಕ್ಕೆ ಕುಸುಮಾ ತಮ್ಮ ಮನೆಯ ರಸ್ತೆಯ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಗಳು ದಾರಿ ಕೇಳುವ ನೆಪದಲ್ಲಿ ಕುಸುಮಾ ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಎಳೆದುಕೊಂಡು ಹೋಗಿದ್ದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನೊಂದು ಪ್ರಕರಣದಲ್ಲಿ ಡಿ.18ರಂದು ಮಧ್ಯಾಹ್ನ 1:30ಕ್ಕೆ ಲೀಲಾ ಅವರು ಕಾಟಿಪಳ್ಳ 5ನೇ ಬ್ಲಾಕ್‌ನ ಸರಕಾರಿ ಪ್ರಾಥಮಿಕ ಶಾಲೆ ಬಳಿ ತನ್ನ ಮೊಮ್ಮಗನ ಜತೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಲೀಲಾ ಅವರ ಕುತ್ತಿಗೆ ಯಿಂದ ಚಿನ್ನದ ಕರಿಮಣಿ ಸರ ಎಳೆದುಕೊಂಡು ಹೋಗಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ಪ್ರಕರಣ: ಆರೋಪಿ ಹಬೀಬ್ ಹಸನ್ ವಿರುದ್ಧ ಮಂಗಳೂರು ಬರ್ಕೆ, ಮೂಡುಬಿದಿರೆ, ಸುರತ್ಕಲ್, ಉಳ್ಳಾಲ, ಕೊಣಾಜೆ, ಬಜ್ಪೆ, ವಿಟ್ಲ, ಬಂಟ್ವಾಳ ನಗರ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 20ಕ್ಕೂ ಅಧಿಕ ಕಳವು, ಜಾನುವಾರು ಕಳವು, ಸರಕಳ್ಳತನ ಪ್ರಕರಣ ಗಳು ದಾಖಲಾಗಿವೆ. ಈತ ಸುಮಾರು ಎರಡು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.
ಮತ್ತೋರ್ವ ಆರೋಪಿ ಅಬ್ದುಲ್ ಮನ್ನಾನ್ ವಿರುದ್ಧ ಕೊಣಾಜೆ, ಉಳ್ಳಾಲ, ಬರ್ಕೆ, ಕಂಕನಾಡಿ ನಗರ ಮತ್ತು ಉರ್ವ ಪೊಲೀಸ್ ಠಾಣೆಗಳಲ್ಲಿ ಕೊಲೆ, ದರೋಡೆ, ಹಲ್ಲೆ ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಈತ ಸುಮಾರು 10 ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ.
ಇನ್ನೋರ್ವ ಆರೋಪಿ ಮುಹಮ್ಮದ್ ತೌಸಿಫ್ ವಿರುದ್ಧವೂ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.
ಹಬೀಬ್ ಹಸನ್ ಮತ್ತು ಮುಹಮ್ಮದ್ ತೌಸಿಫ್ ಡಿ.17ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠದಲ್ಲಿ ಸುಮಾರು 50,000 ರೂ. ಮೌಲ್ಯದ ಬೈಕ್ ಕಳವು ಮಾಡಿದ್ದರು. ನ.25ರಂದು ಮಂಗಳೂರಿನ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯಿಂದ ಅಂದಾಜು 35,000 ರೂ. ಮೌಲ್ಯದ ಸ್ಕೂಟರ್ ಕಳವು ಮಾಡಿದ್ದರು. ನ.30ರಂದು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ರಿಸರ್ವೇಶನ್ ಸೆಂಟರ್‌ನ ಪಾರ್ಕಿಂಗ್ ಸ್ಥಳದಿಂದ ಅಂದಾಜು 12,000 ರೂ. ಮೌಲ್ಯದ ಬೈಕ್ ಕಳ್ಳತನ ಮಾಡಿದ್ದರು. ಮುಹಮ್ಮದ್ ತೌಸಿಫ್ ಬೆಂಗಳೂರಿನ ಮೈಕೋ ಲೇ ಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 50,000 ರೂ. ಅಂದಾಜು ವೌಲ್ಯದ ಬೈಕ್ ಕಳವು ಮಾಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸರಕಳವು ಮತ್ತು ಬೈಕ್ ಕಳವು ಪ್ರಕರಣದಲ್ಲಿ 2.55 ಲಕ್ಷ ರೂ. ವೌಲ್ಯದ ಎರಡು ಚಿನ್ನದ ಕರಿಮಣಿ ಸರಗಳು, ಕಳವು ಮಾಡಿದ ನಾಲ್ಕು ದ್ವಿಚಕ್ರ ವಾಹನ, ಅಪರಾಧ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಮೂರು ಮೊಬೈಲ್ ಪೋನ್ ಸೇರಿದಂತೆ ಒಟ್ಟು ಅಂದಾಜು 5.19 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹರಿರಾಂ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಎ.ಗಾಂವ್ಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್‌ಐಗಳಾದ ರಾಜೇಂದ್ರ ಬಿ., ಪ್ರದೀಪ್ ಟಿ.ಆರ್ ಮತ್ತು ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.








