ಜೋಕಟ್ಟೆಯಲ್ಲಿ ಮತ್ತೆ ಕೋಕ್ ಹುಡಿಕಾಟ : ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಮಂಗಳೂರು, ಡಿ.22: ನಗರದ ಹೊರವಲಯದ ಜೋಕಟ್ಟೆ ಪ್ರದೇಶದಲ್ಲಿ ಕೋಕ್ ಹುಡಿ ದೊಡ್ಡ ಪ್ರಮಾಣದಲ್ಲಿ ಕಾಣಲಾರಂಭಿಸಿರುವ ಹಿನ್ನೆಲೆ ಇಲ್ಲಿನ ನಿವಾಸಿಗಳು ಆತಂಕಿತರಾಗಿದ್ದಾರೆ. ತೆರೆದ ಬಾವಿಗಳಿಗೆ, ಒಣಗಿಸಲು ಹಾಕಿದ ಬಟ್ಟೆಗಳ ಮೇಲೆ, ನಿಲ್ಲಿಸಿರುವ ವಾಹನಗಳ ಮೇಲೆ, ಪಾತ್ರೆಗಳ ಮೇಲೆ ಕಪ್ಪು ಹುಡಿಗಳು ಕಂಡು ಬರುತ್ತಿದೆ.
ಜೋಕಟ್ಟೆ ಪ್ರದೇಶದಲ್ಲಿ ಸೋಮವಾರ ರಾತ್ರಿಯಿಂದ ದೊಡ್ಡ ಪ್ರಮಾಣದಲ್ಲಿ ಮತ್ತೆ ಕೋಕ್ ಹುಡಿ ಮಳೆಯಂತೆ ಸುರಿಯಲಾರಂಭಿಸಿದೆ. ಅಲ್ಲಿನ ನಾಗರಿಕ ಸಮಿತಿಯ ಹೋರಾಟದಿಂದ ಈ ಕೋಕ್ ಹುಡಿ ಕಂಡು ಬರುತ್ತಿರುವ ಪ್ರಮಾಣ ಕಡಿಮೆಯಾಗಿತ್ತು. ಇದೀಗ ಮತ್ತೆ ದೊಡ್ಡ ಪ್ರಮಾಣದಲ್ಲಿ ಕಾಣಲಾರಂಭಿಸಿರುವ ಹಿನ್ನೆಲೆ ಇಲ್ಲಿನ ನಿವಾಸಿಗಳು ಆತಂಕಿತರಾಗಿದ್ದಾರೆ.
ಈ ಬಗ್ಗೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಇದು ಪೆಟ್ರೋಕೆಮಿಕಲ್ ಹುಡಿಯಾಗಿರುವುದರಿಂದ ಅಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಕಳೆದ ಏಳು ವರ್ಷಗಳಿಂದ ಈ ಕೋಕ್ ಹುಡಿ ಹಾರಾಟವನ್ನು ನಿಲ್ಲಿಸಲು ಸತತ ಹೋರಾಟ ನಡೆಸಲಾಗುತ್ತಿದೆ ಎಂದರು.
ಸರಕಾರ ಹಾಗೂ ಎಂಆರ್‌ಪಿಎಲ್ ಕಂಪೆನಿ ಕೈಗೊಳ್ಳಬೇಕಾದ ಆರು ಅಂಶಗಳ ಪರಿಹಾರ ಕ್ರಮಗಳನ್ನು ಆದೇಶಿಸಿ ಗಜೆಟ್ ನೋಟಿಫಿಕೇಶನ್ ಹೊರಡಿಸಿ ನಾಲ್ಕು ವರ್ಷ ಕಳೆಯಿತು. ಆದರೆ, ಎಂಆರ್‌ಪಿಎಲ್ ಸಂಸ್ಥೆ ಐದು ಅಂಶಗಳನ್ನು ಅರೆಬರೆಯಾಗಿ ಮಾಡಿ ಜನರ ಕಣ್ಣಿಗೆ ಮಣ್ಣೆರೆಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರನೇ ಅಂಶವಾದ 27 ಎಕರೆಯಲ್ಲಿ ಜನವಸತಿ ಪ್ರದೇಶ, ಕಂಪೆನಿಯ ನಡುವಿನ ಹಸಿರು ವಲಯ ನಿರ್ಮಾಣ ಇನ್ನೂ ಆರಂಭಿಸದೇ ಜನರ ಆರೋಗ್ಯದ ಜೊತೆಗೆ ಚೆಲ್ಲಾಟ ಆಡುತ್ತಿದೆ. ಜನಪ್ರತಿನಿಧಿಗಳು, ಜಿಲ್ಲಾಡಳಿತಕ್ಕೆ ಕಂಪೆನಿಯ ಕುರಿತು ಮಾತ್ರ ಕಾಳಜಿ ಹೊಂದಿದ್ದಾರೆ. ಗ್ರಾಮಸ್ಥರು ತಡೆಹಿಡಿದ ಕಂಪೆನಿಯ ಕಾಮಗಾರಿಗಳನ್ನು ಬಿಡಿಸಿಕೊಡುವಲ್ಲಿ ಇರುವ ಕಾಳಜಿ ಕಂಪೆನಿಯ ಮಾಲಿನ್ಯ ನಿಯಂತ್ರದ ಕುರಿತಾಗಿ ಇಲ್ಲ ಎಂದು ಟೀಕಿಸಿದರು.
ಕೋಕ್, ಸಲ್ಫರ್‌ಗಳು ಪೆಟ್ರೋ ಕೆಮಿಕಲ್‌ನ ಉತ್ಪನ್ನಗಳಾಗಿದ್ದು, ಇವು ನೇರವಾಗಿ ಜನರ ದೇಹದೊಳಗೆ ಸೇರಿದರೆ ಮಾರಣಾಂತಿಕವಾಗಿ ಪರಿಣಮಿಸುವುದು ಖಚಿತ. ಸಾರ್ವಜನಿಕ ರಂಗದ ದೈತ್ಯ ಕಂಪೆನಿಯ ಇಂತಹ ಅಟಾಟೋಪಗಳಿಗೆ ಕಡಿವಾಣ ಹಾಕಬಲ್ಲ ಜನಪ್ರತಿನಿಧಿಗಳು ಕಾಣುತ್ತಿಲ್ಲ. ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪರ ಮತ ಯಾಚಿಸಲು ಸಂತ್ರಸ್ತ ಪ್ರದೇಶಕ್ಕೆ ಇತ್ತೀಚೆಗೆ ಉಸ್ತುವಾರಿ ಸಚಿವರು ಭೇಟಿ ನೀಡಿದ್ದರು. ಜನರ ಸಮಸ್ಯೆಗಳನ್ನು ಕಣ್ಣಾರೆ ಕಂಡ ಸಚಿವರು ಇನ್ನಾದರೂ ಬಗೆಹರಿಸಲಿ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.







