ರೈತರನ್ನು ಜೀತದಾಳುಗಳನ್ನಾಗಿ, ಬೆನ್ನೆಲುಬನ್ನು ಮುರಿಯುವ ಕೃಷಿ ಕಾಯ್ದೆಗಳು: ಡಾ.ವಸುಂಧರಾ ಭೂಪತಿ

ಬೆಂಗಳೂರು, ಡಿ.22: ರೈತರನ್ನು ಜೀತದಾಳುಗಳನ್ನಾಗಿ ಮಾಡಿ ಅವರ ಬೆನ್ನೆಲುಬನ್ನು ಸಂಪೂರ್ಣವಾಗಿ ಮುರಿಯುವ ಕೃಷಿ ಕಾಯ್ದೆಗಳನ್ನು ವಿರೋಧಿಸಲೇಬೇಕು ಎಂದು ಕನ್ನಡ ಪ್ರಾಧಿಕಾರ ಮಾಜಿ ಅಧ್ಯಕ್ಷೆ ಹಾಗೂ ಲೇಖಕಿ ಡಾ. ವಸುಂಧರಾ ಭೂಪತಿಯವರು ಹೇಳಿದ್ದಾರೆ.
ಮಂಗಳವಾರ ನಗರದ ಮೌರ್ಯ ವೃತ್ತದ ಬಳಿ ದಲಿತ, ರೈತ, ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ದಿಲ್ಲಿಯ ರೈತ ಹೋರಾಟದ ಬೆಂಬಲಿಸಿ ಹಾಗೂ ರಾಜ್ಯ ಸರಕಾರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಪ್ರಗತಿಪರ ಮಹಿಳಾ ಸಂಘಟನೆಗಳು ಹಾಗೂ ಪ್ರಗತಿಪರ ಲೇಖಕರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಾಯ್ದೆಯು ರೈತರನ್ನು ಸ್ವತಂತ್ರರನ್ನಾಗಿ ಮಾಡಲಿದೆ ಎಂದು ಸರಕಾರವು ಸುಳ್ಳು ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಕಾರ್ಪೋರೇಟ್ ಕಂಪನಿಗಳು ರೈತರ ಮೇಲೆ ಬೆಳೆ ಹಾಗೂ ಗೊಬ್ಬರದ ವಿಷಯಗಳಲ್ಲಿ ಹಲವಾರು ನಿರ್ಬಂಧಗಳನ್ನು ಹೇರಿ ಅವರನ್ನು ಶೋಷಣೆ ಮಾಡಲಿದ್ದಾರೆ. ಮಹಾರಾಷ್ಟ್ರದಲ್ಲಿ ಈಗಾಗಲೇ ರಿಲಯನ್ಸ್ ಕಂಪನಿ ನೂರಾರು ಎಕರೆ ಜಮೀನುಗಳನ್ನು ಕಬಳಿಸಿದೆ. ಈ ಕಾಯ್ದೆಯಿಂದ ರೈತರು ಹೆಚ್ಚು ತೊಂದರೆಗೆ ಒಳಗಾಗಲಿದ್ದಾರೆ ಎಂದು ತಿಳಿಸಿದರು.
ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿ, ಸರಕಾರವು ಕೃಷಿ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ, ಶ್ರೀಮಂತ ಉದ್ಯಮಪತಿಗಳಿಗೆ ಬಿಟ್ಟುಕೊಡುತ್ತಿದೆ. ಕಾಯ್ದೆ ಜಾರಿಯಾದರೆ ಸರಕಾರಕ್ಕೂ ರೈತರಿಗೂ ಯಾವುದೇ ಸಂಬಂಧವಿರುವುದಿಲ್ಲ. ಇದು ರೈತ ವಿರೋಧಿ ಹಾಗೂ ಜನ ವಿರೋಧಿ ನಡೆಯಾಗಿದೆ ಎಂದು ದೂರಿದರು.
ಎಐಎಂಎಸ್‍ಎಸ್ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಮಂಜುಳಾ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಹಲವಾರು ಜನ ತಮಗಿರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಮಾಡಬೇಕೆಂದು ನಿರ್ಧರಿಸಿ ನಗರಗಳನ್ನು ತೊರೆದು ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಈಗ ಅವರಿಗೆ ಹಳ್ಳಿಗಳಲ್ಲೂ ಆದಾಯವಿಲ್ಲದೆ ನಗರಗಳಲ್ಲೂ ಕೆಲಸವಿಲ್ಲದೆ, ಪರದಾಡುವ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಈ ಕಾಯ್ದೆಗಳ ವಿರುದ್ಧ ತೀವ್ರವಾದ ಹೋರಾಟವನ್ನು ನಡೆಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.







