ಸಿಲಿಕಾನ್ ಸಿಟಿ ಬೆಂಗಳೂರಿನ 64 ವಾರ್ಡ್ ಗಳಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ !
ಬೆಂಗಳೂರು, ಡಿ.22: ಸಿಲಿಕಾನ್ ಸಿಟಿಯ 64 ವಾರ್ಡ್ ಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ ಎನ್ನುವ ಅಂಶವು ಜನಾಗ್ರಹ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಗಟ್ಟುವ ಉದ್ದೇಶದಿಂದ ಯಲ್ಲೋ ಸ್ಪಾಟ್ ಎಂಬ ಅಭಿಯಾನವನ್ನು ನಡೆಸುತ್ತಿದೆ. ಈ ಅಭಿಯಾನದ ಭಾಗವಾಗಿ ನಗರದಲ್ಲಿ ಸಾರ್ವಜನಿಕರಿಗೆ ಶೀಘ್ರ ಶೌಚಾಲಯಗಳು ಎಷ್ಟು ಅಂತರದಲ್ಲಿ ಇದೆ ಎನ್ನುವ ಬಗ್ಗೆ ಸಮೀಕ್ಷೆ ನಡೆಸುತ್ತಿದೆ. ಆನ್‍ಲೈನ್ ಮೂಲಕವೂ ಜನಾಭಿಪ್ರಾಯ ಸಂಗ್ರಹಿಸಲಾಗಿದ್ದು, 198 ವಾರ್ಡ್ ಗಳ ಪೈಕಿ 64 ವಾರ್ಡ್ ಗಳಲ್ಲಿ ಹಾಗೂ ನಗರದ 11 ಪ್ರಮುಖ ಬಸ್ ನಿಲ್ದಾಣಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
24 ಕಿ.ಮೀಗೆ ಒಂದು ಶೌಚಾಲಯ: ನಿಯಮಾನುಸಾರ ಒಂದು ಸಾರ್ವಜನಿಕ ಶೌಚಾಲಯದಿಂದ ಮತ್ತೊಂದು ಸಾರ್ವಜನಿಕ ಶೌಚಾಲಯದ ನಡುವಿನ ಅಂತರ ಏಳು ಕಿ.ಮೀ ಇರಬೇಕು. ಆದರೆ, ನಗರದಲ್ಲಿ ಅಂದಾಜು 24 ಕಿ.ಮೀಗೆ ಒಂದು ಸಾರ್ವಜನಿಕ ಶೌಚಾಲಯ ಇದೆ. ಶೇ.85ರಷ್ಟು ಸಾರ್ವಜನಿಕ ಶೌಚಾಲಯಗಳು ವಾರ್ಡ್‍ಗಳ ಒಳಭಾಗದಲ್ಲಿದೆ. ಹೀಗಾಗಿ, ಪ್ರವಾಸ ಮಾಡುವವರು ಅಥವಾ ಹೊರ ಜಿಲ್ಲೆ ಮತ್ತು ರಾಜ್ಯದಿಂದ ಬರುವವರು ಸಾರ್ವಜನಿಕ ಶೌಚಾಲಯಕ್ಕೆ ಪರದಾಡಬೇಕಾದ ಪರಿಸ್ಥಿತಿ ಇದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.







