ಕೊರೋನ ನೂತನ ಪ್ರಭೇದವು ನಿಯಂತ್ರಣ ಮೀರಿಲ್ಲ: ಡಬ್ಲ್ಯುಎಚ್‌ಒ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಡಿ. 22: ಬ್ರಿಟನ್‌ನಲ್ಲಿ ಪತ್ತೆಯಾಗಿರುವ, ಅಧಿಕ ಸಾಂಕ್ರಾಮಿಕ ಗುಣವುಳ್ಳ ಕೊರೋನ ವೈರಸ್ ಹೊಸ ಪ್ರಭೇದವು ಈಗಲೂ ನಿಯಂತ್ರಣ ಮೀರಿ ಹೋಗಿಲ್ಲ ಹಾಗೂ ಈಗ ಲಭ್ಯವಿರುವ ಉಪಕ್ರಮಗಳನ್ನೇ ಬಳಸಿಕೊಂಡು ಅದನ್ನು ನಿಯಂತ್ರಿಸಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸೋಮವಾರ ಹೇಳಿದೆ.
‘‘ಈ ಸಾಂಕ್ರಾಮಿಕದ ಅವಧಿಯಲ್ಲಿ ವಿವಿಧ ಹಂತಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಸಾಂಕ್ರಾಮಿಕ ಗುಣವುಳ್ಳ ವೈರಸ್‌ಗಳನ್ನು ನೋಡಿದ್ದೇವೆ ಹಾಗೂ ಅವುಗಳನ್ನು ನಿಯಂತ್ರಣಕ್ಕೆ ತಂದಿದ್ದೇವೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸೇವೆಗಳ ಮುಖ್ಯಸ್ಥ ಮೈಕಲ್ ರಯಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೊಸ ಪ್ರಭೇದಕ್ಕೆ 6 ವಾರಗಳಲ್ಲಿ ಲಸಿಕೆ: ಬಯೋಎನ್‌ಟೆಕ್
ಬ್ರಿಟನ್‌ನಲ್ಲಿ ಪತ್ತೆಯಾಗಿರುವ ರೂಪಾಂತರಿತ ಕೊರೋನ ವೈರಸ್ ಪ್ರಭೇದದ ವಿರುದ್ಧ ತಮ್ಮ ಲಸಿಕೆಯು ಪರಿಣಾಮಕಾರಿಯಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಫೈಝರ್ ಲಸಿಕೆಯ ಪಾಲುದಾರ ಸಂಸ್ಥೆ ಜರ್ಮನಿಯ ಬಯೋಎನ್‌ಟೆಕ್‌ನ ಸಹ-ಸಂಸ್ಥಾಪಕ ಉಗುರ್ ಸಾಹಿನ್ ಹೇಳಿದ್ದಾರೆ.
ಅದೂ ಅಲ್ಲದೆ, ಅಗತ್ಯ ಬಿದ್ದರೆ ಕೇವಲ ಆರು ವಾರಗಳಲ್ಲಿ ತಮ್ಮ ಲಸಿಕೆಯನ್ನು ಹೊಸ ಕೊರೋನ ಪ್ರಭೇದಕ್ಕೆ ಪರಿಣಾಮಕಾರಿಯಾಗುವ ರೀತಿಯಲ್ಲಿ ಮಾರ್ಪಡಿಸಬಹುದಾಗಿದೆ ಎಂದು ಅವರು ನುಡಿದರು.







