ಭಗಿನಿ ಅಭಯಾ ಕೊಲೆ ಪ್ರಕರಣ: ಕೆಥೊಲಿಕ್ ಧರ್ಮಗುರು, ಕ್ರೈಸ್ತ ಸನ್ಯಾಸಿನಿ ದೋಷಿ
ತಿರುವನಂತಪುರದ ಸಿಬಿಐ ನ್ಯಾಯಾಲಯ ತೀರ್ಪು

ತಿರುವನಂತಪುರ, ಡಿ. 22: ಇಲ್ಲಿನ ಕಾನ್ವೆಂಟ್‌ನಲ್ಲಿ ಭಗಿನಿ ಅಭಯಾ ಹತ್ಯೆ ಸಾವಿನ ಪ್ರಕರಣದಲ್ಲಿ ಕೆಥೊಲಿಕ್ ಧರ್ಮಗುರು ಹಾಗೂ ಕ್ರೈಸ್ತ ಸನ್ಯಾಸಿನಿ ದೋಷಿ ಎಂದು ಕೇರಳದ ತಿರುವನಂತಪುರದ ಸಿಬಿಐ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ಭಗಿನಿ ಅಭಯಾ ಅವರದ್ದು ಸ್ಪಷ್ಟವಾಗಿ ಕೊಲೆ ಎಂದು ಹೇಳಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆ. ಸನಲ್ ಕುಮಾರ್, ಧರ್ಮಗುರು ಥಾಮಸ್ ಕೊಟ್ಟೂರು ಹಾಗೂ ಸಿಸ್ಟರ್ ಸೆಫಿ ಅವರನ್ನು ದೋಷಿ ಎಂದು ಘೋಷಿಸಿದ್ದಾರೆ. ಸಿಬಿಐ ನ್ಯಾಯಾಲಯ ತೀರ್ಪು ಘೋಷಿಸಿದ ಬಳಿಕ ದೋಷಿಗಳಾದ ಧರ್ಮಗುರು ಥಾಮಸ್ ಕೊಟ್ಟೂರು ಹಾಗೂ ಸಿಸ್ಟರ್ ಸೆಫಿ ಬಿಕ್ಕಿ ಬಿಕ್ಕಿ ಅತ್ತರು. ದೋಷಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಬುಧವಾರ ಘೋಷಿಸಲಿದೆ.
ಧರ್ಮಗುರು ಥಾಮಸ್ ಕೊಟ್ಟೂರು ಹಾಗೂ ಸಿಸ್ಟರ್ ಸೆಫಿಯನ್ನು ದೋಷಿ ಎಂದು ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಸಿಸ್ಟರ್ ಅಭಯಾ ಅವರ ಸಹೋದರ ಬಿಜು ಥಾಮಸ್ ಸಂತಸ ವ್ಯಕ್ತಪಡಿಸಿದ್ದಾರೆ.
‘‘ನನ್ನ 28 ವರ್ಷದ ಹೋರಾಟ ಫಲ ನೀಡಿದೆ’’ ಎಂದು ಸಿಸ್ಟರ್ ಅಭಯಾ ಹಾಗೂ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಲು ಏಕಾಂಗಿಯಾಗಿ ಹೋರಾಡಿದ್ದ ಸಾಮಾಜಿಕ ಹೋರಾಟಗಾರ ಜೋಮೋನ್ ಪುತ್ತನ್‌ಪುರಕ್ಕಲ್ ಹೇಳಿದ್ದಾರೆ. ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ರಾಜು ಕೂಡ ನ್ಯಾಯಾಲಯದ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ತೀರ್ಪು ತನಗೆ ಸಂತಸ ತಂದಿದೆ ಎಂದು ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿ ವರ್ಗೀಸ್ ಪಿ. ಥಾಮಸ್ ಹೇಳಿದ್ದಾರೆ.







