ಜಮ್ಮು ಹಾಗೂ ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ: ಗುಪ್ಕರ್ ಅಲಯನ್ಸ್ ಮೇಲುಗೈ
ಕಾಶ್ಮೀರ, ಡಿ. 22: ಜಮ್ಮು ಹಾಗೂ ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಪೀಪಲ್ಸ್ ಅಲೈಯನ್ಸ್ ಆನ್ ಗುಪ್ಕರ್ ಡಿಕ್ಲರೇಶನ್ (ಪಿಎಜಿಡಿ) ಇದುವರೆಗೆ 81 ಸ್ಥಾನಗಳಲ್ಲಿ ಮುನ್ನಡೆ ಸಾಧಿದೆ ಹಾಗೂ 30 ಸ್ಥಾನಗಳಲ್ಲಿ ಜಯಗಳಿಸಿದೆ.
ಬಿಜೆಪಿ ಇದುವರೆಗೆ 56 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, 8 ಸ್ಥಾನಗಳಲ್ಲಿ ಜಯ ಗಳಿಸಿದೆ. ಕಾಂಗ್ರೆಸ್ ಇದುವರೆಗೆ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ನಾಲ್ಕು ಸ್ಥಾನಗಳಲ್ಲಿ ಜಯ ಗಳಿಸಿದೆ. 2019 ಆಗಸ್ಟ್ 5ರಂದು 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ಮೊದಲ ಸ್ಥಳೀಯ ಚುನಾವಣೆ ಇದಾಗಿದೆ. ಗುಪ್ಕರ್ ಅಲೆಯನ್ಸ್ ಜಮ್ಮು ಹಾಗೂ ಕಾಶ್ಮೀರದ ಜನತೆ ತಮ್ಮ ಬೆಂಬಲ ನೀಡಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಮಂಗಳವಾರ ಹೇಳಿದ್ದಾರೆ.
ಅಲ್ಲದೆ, ಡಿಡಿಸಿ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರು ಸ್ಥಾಪಿಸುವ ಪಿಎಜಿಡಿಯ ಯೋಜನೆಯನ್ನು ಅನುಮೋದಿಸಿದ್ದಾರೆ ಎಂದು ಉಮರ್ ಅಬ್ದುಲ್ಲಾ ಹೇಳಿದ್ದಾರೆ.





