ಜಮ್ಮು-ಕಾಶ್ಮೀರ ಸ್ಥಳೀಯ ಚುನಾವಣೆ: ಕಾಶ್ಮೀರ ಕಣಿವೆಯಲ್ಲಿ ಗುಪ್ಕರ್ ಮೈತ್ರಿಕೂಟ ಮೇಲುಗೈ
ಜಮ್ಮುವಿನಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷ
ಶ್ರೀನಗರ, ಡಿ.23: ಜಮ್ಮು ಕಾಶ್ಮೀರ ಜಿಲ್ಲಾಭಿವೃದ್ಧಿ ಮಂಡಳಿ(ಡಿಡಿಸಿ)ಗೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಗುಪ್ಕರ್ ಘೋಷಣೆಗಾಗಿನ ಜನತಾ ಮೈತ್ರಿಕೂಟ(ಪಿಎಜಿಡಿ) 110 ಸ್ಥಾನಗಳಲ್ಲಿ ಜಯ ಸಾಧಿಸಿದೆ. 75 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ನ್ಯಾಷನಲ್ ಕಾನ್ಫರೆನ್ಸ್(ಎನ್ಸಿ), ಪೀಪಲ್ಸ್ ಡೆಮಕ್ರಾಟಿಕ್ ಪಾರ್ಟಿ(ಪಿಡಿಪಿ), ಪೀಪಲ್ಸ್ ಕಾನ್ಫರೆನ್ಸ್(ಪಿಸಿ), ಪೀಪಲ್ಸ್ ಮೂವ್ಮೆಂಟ್(ಪಿಎಂ), ಸಿಪಿಐ(ಎಂ) ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್(ಎಎನ್ಸಿ) ಮತ್ತು ಕಾಂಗ್ರೆಸ್ ಪಕ್ಷಗಳನ್ನೊಳಗೊಂಡ ಪಿಎಜಿಡಿ ಚುನಾವಣಾ ಮೈತ್ರಿಕೂಟ ಕಾಶ್ಮೀರ ವಲಯದಲ್ಲಿ ಪ್ರಭಾವೀ ಸಾಧನೆ ತೋರಿದ್ದು ಇಲ್ಲಿಯ 76ಶೇ. ಸ್ಥಾನಗಳನ್ನು ಗೆದ್ದಿದೆ.
ಜಮ್ಮು ವಲಯದಲ್ಲಿ ಬಿಜೆಪಿ ತನ್ನ ಹಿಡಿತವನ್ನು ಉಳಿಸಿಕೊಂಡಿರುವ ಜೊತೆಗೆ ಕಾಶ್ಮೀರ ವಲಯದ ಕಾಕಪೋರ, ಖನ್ಮೋಹ್ ಮತ್ತು ತುಲೈಲ್ ಕ್ಷೇತ್ರಗಳಲ್ಲೂ ಗೆಲುವಿನ ನಗೆ ಬೀರಿದೆ. ಜಮ್ಮು ವಲಯದಲ್ಲಿ ಪಿಎಜಿಡಿಯ ಮಿತ್ರಪಕ್ಷಗಳೊಳಗೆ ಸೀಟು ಹಂಚಿಕೆಯ ಬಗ್ಗೆ ಒಮ್ಮತ ಮೂಡಿರಲಿಲ್ಲ. ಇಲ್ಲಿ ಬಿಜೆಪಿ ಮತ್ತು ಪಿಡಿಪಿಯ ಮಾಜಿ ಮುಖಂಡ ಅಲ್ತಾಫ್ ಬುಖಾರಿ ನೇತೃತ್ವದ ಅಪ್ನಿ ಪಾರ್ಟಿಯಿಂದ ಮೈತ್ರಿಕೂಟಕ್ಕೆ ನಿಕಟ ಸ್ಪರ್ಧೆ ಇದಿರಾಗಿದೆ. ಒಟ್ಟು 280 ಸ್ಥಾನಗಳಿಗೆ ಚುನಾವಣೆ ನಡೆದಿದೆ. ನ್ಯಾಷನಲ್ ಕಾನ್ಫರೆನ್ಸ್ಗೆ 67, ಪಿಡಿಪಿಗೆ 27, ಕಾಂಗ್ರೆಸ್ಗೆ 26, ಪೀಪಲ್ಸ್ ಕಾನ್ಫರೆನ್ಸ್ಗೆ 8, ಸಿಪಿಐ(ಎಂ)ಗೆ 5 ಮತ್ತು ಅಪ್ನಿ ಪಾರ್ಟಿ 12 ಸ್ಥಾನಗಳಲ್ಲಿ ಜಯ ಲಭಿಸಿದೆ. ಪಕ್ಷೇತರರು 50 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಅವಾಮಿ ನ್ಯಾಷನಲ್ ಕಾನ್ಫರೆನ್ಸ್, ಪ್ಯಾಂಥರ್ಸ್ ಪಾರ್ಟಿ ಮುಂತಾದ ಇತರ ಸಣ್ಣಪಕ್ಷಗಳು ಉಳಿದ ಸ್ಥಾನಗಳನ್ನು ಹಂಚಿಕೊಂಡಿವೆ.
ಕಾಶ್ಮೀರದಲ್ಲಿ ಅತ್ಯಂತ ಕ್ಷೋಭೆಗೊಳಗಾದ ಪ್ರದೇಶಗಳಲ್ಲಿ ಒಂದಾಗಿರುವ ಪುಲ್ವಾಮ ಜಿಲ್ಲೆಯಲ್ಲಿ ಕುತೂಹಲಕಾರಿ ಫಲಿತಾಂಶ ಹೊರಬಿದ್ದಿದೆ. 14 ಸ್ಥಾನಗಳಲ್ಲಿ ಪಿಡಿಪಿಗೆ 9, 1 ಬಿಜೆಪಿ, ಪಕ್ಷೇತರರು 4 ಸ್ಥಾನಗಳಲ್ಲಿ ಜಯಸಾಧಿಸಿದ್ದಾರೆ. ಕೆಲವೆಡೆ ಪಿಎಜಿಡಿ ಮೈತ್ರಿಕೂಟದ ಅಭ್ಯರ್ಥಿಗಳೇ ಪರಸ್ಪರ ಇದಿರಾಗಿರುವುದೂ ಮೈತ್ರಿಕೂಟದ ಸಾಧನೆಯ ಮೇಲೆ ಪರಿಣಾಮ ಬೀರಿದೆ. ಅಮಾನತುಗೊಂಡ ಜಮ್ಮು ಕಾಶ್ಮೀರ ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ತಿಹಾರ್ ಜೈಲಿನಲ್ಲಿರುವ ಪಿಡಿಪಿಯ ಯುವ ಮುಖಂಡ ವಹೀದ್ ಪಾರ ಪುಲ್ವಾಮ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವುದು ಗಮನಾರ್ಹವಾಗಿದೆ.
ಹಿರಿಯ ಕಾಂಗ್ರೆಸ್ ಮುಖಂಡ, ಜಮ್ಮುಕಾಶ್ಮೀರದ ಮಾಜಿ ಸಚಿವ ತಾಜ್ ಮೊಹಿದೀನ್ ಬಾರಾಮುಲ್ಲದಲ್ಲಿ 9,730 ಮತಗಳ ಅಂತರದಿಂದ ಗೆದ್ದಿದ್ದಾರೆ. ಆದರೆ ಅವರಿಲ್ಲಿ ಸೋಲಿಸಿದ್ದು ಪೀಪಲ್ಸ್ ಕಾನ್ಫರೆನ್ಸ್ನ ಅಭ್ಯರ್ಥಿಯನ್ನು. ಕಾಂಗ್ರೆಸ್ 26 ಸ್ಥಾನ ಗೆದ್ದಿದ್ದರೂ, ಜಮ್ಮು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ಜಿಎ ಮೀರ್ ಪುತ್ರ ನಾಸಿರ್ ಮೀರ್ ಅನಂತನಾಗ್ನ ವೆರಿನಾಗ್ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ.
“ಬಿಜೆಪಿಯನ್ನು ಸೋಲಿಸಲು ಇಷ್ಟೊಂದು ರಾಜಕೀಯ ಪಕ್ಷಗಳು ಒಗ್ಗೂಡಿರುವುದು ನಾಚಿಕೆಗೇಡು. ಆದರೂ ನಾವು ಏಕೈಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಕಾಶ್ಮೀರದಲ್ಲಿ 3 ಸ್ಥಾನ ಗೆದ್ದಿದ್ದೇವೆ. ಪಕ್ಷವು ಜಮ್ಮು ಕಾಶ್ಮೀರದಲ್ಲಿ ಪ್ರಮುಖ ಛಾಪು ಮೂಡಿಸಿದೆ” ಎಂದು ಬಿಜೆಪಿಯ ಮಾಧ್ಯಮ ವಕ್ತಾರ ಮನ್ಸೂರ್ ಭಟ್ ಪ್ರತಿಕ್ರಿಯಿಸಿದ್ದಾರೆ.