ಸರಳ ಕ್ರಿಸ್‌ಮಸ್ ಆಚರಣೆಗೆ ಮಂಗಳೂರು ಬಿಷಪ್ ಕರೆ

ಮಂಗಳೂರು, ಡಿ.23: ಕೋವಿಡ್ ಸಂಕಷ್ಟದ ಜತೆಯಲ್ಲಿ ನಾವೇನು ಉಳಿಸಿದ್ದೇವೆಯೋ ಅದನು ಬಡವರೊಡನೆ ಹಂಚಿಕೊಂಡು ಈ ಬಾರಿ ಸರಳ ಕ್ರಿಸ್‌ಮಸ್ ಆಚರಣೆ ನಮ್ಮದಾಗಲಿ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟಲ್ ಪಾವ್ಲ್ ಡಿಸೋಜಾ ಕರೆ ನೀಡಿದ್ದಾರೆ.
ಬಿಷಪ್ ಹೌಸ್‌ನಲ್ಲಿ ಇಂದು ಅವರು ಸುದ್ದಿಗೋಷ್ಠಿಯಲ್ಲಿ ಕ್ರಿಸ್‌ಮಸ್ ಸಂದೇಶ ನೀಡಿದರು.
ಚಿಂದಿ ಬಟ್ಟೆಯಲ್ಲಿ ಸುತ್ತಿದ್ದ ಹಾಗೂ ಗೋದಲಿಯಲ್ಲಿ ಮಲಗಿದ್ದ ಬಾಲಯೇಸು ಆಹಾರವಿಲ್ಲದ ಹಸಿದ ಹೊಟ್ಟೆಯಲ್ಲಿ ನಿದ್ದೆಗೆ ಜಾರುವ ಬಡವರ ಕಷ್ಟ ಗಳನ್ನು ಅನುಭವಿಸಿದವರು. ವಸತಿ ಇಲ್ಲದೆ ಬೀದಿ ಬದಿಗಳಲ್ಲಿ ಮಲಗುವ ನಿರಾಶ್ರಿತ ಆತಂಕಗಳನ್ನು ಅರಿತವರು. ಉದ್ಯೋಗ ಕಳೆದುದರಿಂದ ತಮ್ಮ ಕುಟುಂಬಗಳನ್ನು ಕಷ್ಟಪಡುತ್ತಿರುವ ನಿರುದ್ಯೋಗಿಗಳ ಬವಣೆ ಅರಿತವರು. ಕೋವಿಡ್ ಮತ್ತು ಇತರ ರೋಗಗಳಿಂದ ಔಷಧಕ್ಕಾಗಿ ಹಣ ಇಲ್ಲದವರ ಪಾಡನ್ನು ತಿಳಿದವರು. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಲು ಕಷ್ಟಪಡುತ್ತಿರುವ ಹೆಚ್ತವರ ದುಖವನ್ನು ಅರಿತವರು ಯೇಸವಾಗಿದ್ದು, ಇಂತಹ ಸಮಾಜದಲ್ಲಿರುವ ಅಶಕ್ತರೊಡನೆ ನಾವು ಬೆರೆತು ಕ್ರಿಸ್‌ಮಸ್ ಆರಿಸೋಣ ಎಂದು ಅವರು ಹೇಳಿದರು.
ಮಂಗಳೂರು ಧರ್ಮಪ್ರಾಂತ್ಯವು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸುಮಾರು 1.5 ಕೋಟಿ ರೂ. ಮೌಲ್ಯದ ನಾನಾ ರೀತಿಯ ನೆರವನ್ನು ನೀಡಿದೆ ವಲಸೆ ಕಾರ್ಮಿಕರಿಗೆ ವಸತಿ ಉಪಹಾರ ಒದಗಿಸಿದೆ. ಹೊಸ ವರ್ಷದಲ್ಲಿ ಬಡವರ ಮನೆಗಳ ದುರಸ್ತಿ ಹಾಗೂ ಇತರ ಸೌಕರ್ಯಗಳ ಅಭಿವೃದ್ಧಿಗೆ ಪ್ರಯತ್ನಿಸಿ, ಅಶಕ್ತರನ್ನು ಸಬಲರನ್ನಾಗಿಸಲು ಪ್ರಯತ್ನಿಸೋಣ ಎಂದು ಅವರು ಸಂದೇಶ ನೀಡಿದರು.
ಕ್ರಿಸ್‌ಮಸ್ ಹಬ್ಬವು ನಮ್ಮ ಸಂಕುಚಿತ ದೃಷ್ಟಿಕೋನವನ್ನು ತ್ಯಜಿಸಲು ಮತ್ತು ನಮ್ಮ ದಿಗಂತವನ್ನು ವಿಸ್ತಾರಗೊಳಿಸಲು, ಕಷ್ಟದಲ್ಲಿರುವವರು, ಬಡವರು, ತಿರಸ್ಕೃತರನ್ನು ಸ್ವಾಗತಿಸಲು ಹಾಗೂ ರಕ್ಷಿಸಲು ನಮಗೆ ಪಂಥಾಹ್ವಾನವನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ರಾಯ್ ಕ್ಯಾಸ್ತಲಿನೊ, ರೆ.ಫಾ ವಿಕ್ಟರ್ ವಿಜಯ್ ಲೋಬೋ, ಫಾ. ರಿಚ್ಚರ್ಡ್ ಲೋಬೋ, ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ರೈತರ ಆತಂಕವನ್ನು ದೂರವಾಗಲಿ
ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿ ಮಾತನಾಡಿದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ, ರೈತ ವರ್ಗ ಇಂದು ಆತಂಕಗೊಂಡಿದೆ. ಅವರ ತಳಮಳ, ಸಮಸ್ಯೆಯನ್ನು ಅರಿತು ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಆಡಳಿತದಲ್ಲಿರುವವರು ಮಾಡಬೇಕಿದೆ. ಅವರ ಪ್ರಶ್ನೆಗಳಿಗೆ ಶಾಂತ ಚಿತ್ತದಿಂದ ಆಲಿಸಿ ಸ್ಪಂದಿಸಬೇಕಾಗಿದೆ ಎಂದು ಹೇಳಿದರು.
ಕೋವಿಡ್ ಮುಂಜಾಗೃತಾ ಕ್ರಮಗಳೊಂದಿಗೆ ಚರ್ಚ್‌ಗಳಲ್ಲಿ ಪ್ರಾರ್ಥನೆ
ಕೋವಿಡ್ ಹಿನ್ನೆಲೆಯಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನಡೆಯುವ ಪ್ರಾರ್ಥನಾ ವಿಧಿ ವಿಧಾನಗಳಲ್ಲಿ ಹೆಚ್ಚು ಜನ ಸೇರದಂತೆ, ಸುರಕ್ಷಿತ ಅಂತರ ಕಾಯ್ದುಕೊಂಡು ಶಿಸ್ತಿನೊಂದಿಗೆ ಪೂಜೆಗಳನ್ನು ಚರ್ಚ್‌ಗಳಲ್ಲಿ ನೆರವೇರಿಸಲಾಗುವುದು. ಚರ್ಚ್‌ಗಳಲ್ಲಿ ವಿವಿಧ ಸಮಯಗಳಲ್ಲಿ ಪ್ರಾರ್ಥನೆಗಳನ್ನು ನಡೆಸುವ ಮೂಲಕ ಏಕಕಾಲದಲ್ಲಿ ಹೆಚ್ಚು ಭಕ್ತರು ಸೇರುವುದನ್ನು ನಿಯಂತ್ರಿಸಲಾಗುವುದು. ಮಾತ್ರವಲ್ಲದೆ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಸಂಜೆಯ ವೇಳೆಗೆ ನಡೆಯುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗಿದೆ
- ರೆ.ಡಾ. ಪೀಟರ್ ಪಾವ್ಲ್ ಸಲ್ಡಾನಾ, ಬಿಷಪ್, ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯ







