ಫುಡ್ ಡೆಲಿವರಿ ಆ್ಯಪ್ ಮೂಲಕ ಡ್ರಗ್ ಪೂರೈಸುತ್ತಿದ್ದವರು ಪೊಲೀಸ್ ಬಲೆಗೆ
‘ಆಹಾರದ ಪ್ಯಾಕ್ ರೀತಿಯಲ್ಲೇ ಸಾಗಾಟ’

ಹೈದರಾಬಾದ್,ಡಿ.23: ಡ್ರಗ್ಸ್ ಮಾರಾಟಗಾರರು ಅವುಗಳನ್ನು ಖರೀದಿದಾರರಿಗೆ ತಲುಪಿಸಲು ಹೊಸ ಹೊಸ ವಿಧಾನ ಹುಡುಕುತ್ತಿದ್ದು ಇಂತಹ ಒಂದು ವಿಧಾನದಲ್ಲಿ ಡ್ರಗ್ಸ್ ಅನ್ನು ತಿನಿಸುಗಳ ಜತೆ ಪ್ಯಾಕ್ ಮಾಡಿ ಫುಡ್ ಡೆಲಿವರಿ ಮಾಡುವ ಆ್ಯಪ್‍ಗಳನ್ನು ದುರ್ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಎರಡು ಘಟನೆಗಳು ಪೊಲೀಸರ ಗಮನಕ್ಕೆ ಬಂದಿದ್ದು ಆಹಾರ ಪಾರ್ಸೆಲ್ ತಲುಪಿಸುವ ನೆಪದಲ್ಲಿ ಅದರ ಜತೆಗೆ ಡ್ರಗ್ಸ್ ಅನ್ನು ತಲುಪಿಸುವವರಿಗೆ ತಿಳಿಯದ ರೀತಿಯಲ್ಲಿ ಇರಿಸಲಾಗಿತ್ತು.
ಡಿಸೆಂಬರ್ ಎರಡನೇ ವಾರದಲ್ಲಿ ಅಬಕಾರಿ ತಂಡವು ರಾಮ್ ನಗರ್ ಪ್ರದೇಶದಲ್ಲಿ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಒಬ್ಬನನ್ನು ಬಂಧಿಸಿ ಆತನಿಂದ ಗಾಂಜಾ ವಶಪಡಿಸಿಕೊಂಡಿತ್ತು. ಆದರೆ ಆತನ ಫೋನ್ ಡಾಟಾ ಪರಿಶೀಲಿಸಿದಾಗ ಆತ ಯಾರಿಂದಲೋ ಎಲ್‍ಎಸ್‍ಡಿಗೆ ಆರ್ಡರ್ ಮಾಡಿದ್ದು ಬೆಳಕಿಗೆ ಬಂದಿತ್ತಲ್ಲದೆ ನಂತರ ಅದನ್ನು ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಮೂಲಕ ತರಿಸಿಕೊಂಡಿದ್ದ.
ಈ ರೀತಿ ಹ್ಯಾಶೀಶ್ ಆಯಿಲ್ ಸರಬರಾಜು ಮಾಡುತ್ತಿದ್ದ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀಪತಿ ಎಂಬ ಹೆಸರಿನ 24 ವರ್ಷ ವಯಸ್ಸಿನ ಈತ ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿದವನೆಂದು ತಿಳಿದು ಬಂದಿದ್ದು 10 ಎಂಲ್ ಹಶೀಶ್ ಆಯಿಲ್‍ಗೆ ಆತ ರೂ 3,000 ಪಡೆಯುತ್ತಿದ್ದನೆನ್ನಲಾಗಿದೆ. ನಂತರ ಆಹಾರದ ಪಾರ್ಸೆಲ್ ಮಾದರಿಯಲ್ಲಿಯೇ ಇದನ್ನು ಪಾರ್ಸೆಲ್ ಮಾಡಿ ಕಳುಹಿಸುತ್ತಿದ್ದ. ಇನ್ನೊಬ್ಬಾತ ಇನ್‍ಸ್ಟಾಗ್ರಾಂ ಮೂಲಕ ಎಲ್‍ಎಸ್‍ಡಿಗೆ ಆರ್ಡರ್ ಪಡೆಯುತ್ತಿದ್ದನೆನ್ನಲಾಗಿದ್ದು ಆತ ಮಾತ್ರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಈ ರೀತಿ ಡ್ರಗ್ಸ್ ಖರೀದಿಸುವವರು ಇ-ವ್ಯಾಲೆಟ್ ಮೂಲಕ ಹಾಗೂ ಬಿಟ್ ಕಾಯಿನ್ ಮೂಲಕ ಹಣ ಪಾವತಿಸುತ್ತಾರೆಂದು ಪೊಲೀಸರು ಹೇಳಿದ್ದಾರೆ.







