ಪುತ್ತೂರು ಆರ್.ಟಿ.ಒ ಕಚೇರಿಯಲ್ಲಿ ಕಿರುಕುಳ, ಶೋಷಣೆ ಮುಕ್ತ ಅಭಿಯಾನಕ್ಕೆ ಸಿದ್ಧತೆ: ಅಮಳ ರಾಮಚಂದ್ರ
ಪುತ್ತೂರು: ಪುತ್ತೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಚಾಲನಾ ಪರೀಕ್ಷೆ ನಿಡುವ ಸಲುವಾಗಿ ಹೋದಾಗ ಆರ್.ಟಿ.ಒ ನೀಡಿದ ಕಿರುಕುಳದ ಕುರಿತು ಮೇಲಾಧಿಕಾರಿಗಳಿಗೆ ದೂರು ನೀಡಿದ ಬಳಿಕ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಪುತ್ತೂರು ಆರ್.ಟಿ.ಒ ಸೇರಿದಂತೆ ಹಲವು ಕಡೆಗಳಿಂದ ಒತ್ತಡ ಬರುತ್ತಿದೆ. ಆದರೆ ನನ್ನಂತೆ ಸಾವಿರಾರು ಮಂದಿ ಸಂತ್ರಸ್ತರ ಪರವಾಗಿ ಮತ್ತು ಅವರ ಬೆಮಬಲದಿಂದ ಇದೀಗ ಶೋಷಣೆ ಮುಕ್ತ ಪುತ್ತೂರು ಅಭಿಯಾನ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ 'ಶೋಷಣೆ ಮುಕ್ತ ಅಭಿಯಾನ'ದ ಸದಸ್ಯ ಅಮಳ ರಾಮಚಂದ್ರ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ಆರ್.ಟಿ.ಒ ಕಚೇರಿಯಲ್ಲಿ ನನಗೆ ಆದ ಅನ್ಯಾಯಕ್ಕೆ ಸಂಬಂಧಿಸಿ ನಾನು ಪತ್ರಿಕಾಗೋಷ್ಠಿ ಮೂಲಕ ಹೇಳಿಕೊಂಡಿರುವ ವಿಚಾರದಿಂದ ಜನಸಾಮಾನ್ಯರಿಂದ ಅಭೂತ ಪೂರ್ವ ಬಂಬಲ ದೊರೆತಿದೆ. ಬಹುತೇಕ ಮಂದಿ ನಮಗೂ ಆರ್.ಟಿ.ಒ ಕಚೇರಿಯಲ್ಲಿ ಅನ್ಯಾಯ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ನನ್ನ ವೈಯುಕ್ತಿಕ ಹೋರಾಟ ಇವತ್ತು ಜನಸಾಮಾನ್ಯರ ಅಭಿಯಾನವಾಗಿ ಮಾರ್ಪಟ್ಟಿದೆ. ಆದರೆ ಈ ನಡುವೆ ನನಗೆ ಅನೇಕ ಮಂದಿಯಿಂದ ಹೋರಾಟವನ್ನು ಹಿಂಪಡೆಯುವಂತೆ ಒತ್ತಡವೂ ಬಂದಿದೆ. ಇದರ ಜೊತೆಗೆ ಆರ್‍ಟಿಒ ಅವರೇ ಖುದ್ದು ನನಗೆ ಅಂಚೆ ರಿಜಿಸ್ಟರ್ ಪೋಸ್ಟ್ ಮಾಡಿ ನೀವು ಕಚೇರಿಗೆ ಖುದ್ದಾಗಿ ಭೇಟಿ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಕೋರಿದ್ದಾರೆ. ಒಟ್ಟಿನಲ್ಲಿ ಮೇಲಾಧಿಕಾರಿಗಳಿಗೆ ದೂರು ನೀಡಿದ ಬಳಿಕ ನನ್ನ ಮೇಲೆ ವಿವಿಧ ಕಡೆಗಳಿಗಳಿಂದ ಒತ್ತಡ ಹೇರುವ ಪ್ರಯತ್ನ ಆಗುತ್ತಿದೆ. ಆದರೆ ನನ್ನ ಅಭಿಯಾನಕ್ಕೆ ಪುತ್ತೂರಿನ ಜನತೆ ನೀಡಿದ ಅಭೂತಪೂರ್ವ ಬೆಂಬಲ ನನ್ನ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ. ಪುತ್ತೂರಿನ ಮಹಾಜನತೆಯ ಪರವಾಗಿ ಈ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಸಿಗುವ ತನಕ ನನ್ನ ಅಭಿಯಾನ ಮುಂದುವರಿಯುತ್ತದೆ. ಒಬ್ಬ ಸಂತ್ರಸ್ತನಿಂದ ಆರಂಭವಾದ ಈ ಆಭಿಯಾನ ಈಗ ಸಾವಿರಾರು ಸಂತ್ರಸ್ತ ಜನರ ಅಭಿಯಾನವಾಗಿ ರೂಪುಗೊಂಡಿದೆ ಎಂದರು.
ಈ ಪ್ರಕರಣದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಅಧಿಕಾರವಿರುವುದು ನನಗಲ್ಲ. ಬದಲಾಗಿ ಅದು ಪುತ್ತೂರಿನ ಮಹಾಜನತೆಗೆ ಸೇರಿದ್ದು ಎಂಬುದು ನನ್ನ ತೀರ್ಮಾನವಾಗಿದೆ. ಆದ್ದರಿಂದ ಇದು ಜನತೆಯ ಅಭಿಯಾನ. ಈ ಅಭಿಯಾನದ ಮುಂದಿನ ದಾರಿಯನ್ನು ಪುತ್ತೂರಿನ ಮಹಾಜನತೆಯೇ ನಿರ್ದೇಶಿಸಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.
ಅತೀ ಶೀಘ್ರ ಸಾರಿಗೆ ಅದಾಲತ್ ಆಗಬೇಕು
ಶೋಷಣೆ ಮುಕ್ತ ಪುತ್ತೂರು ಅಭಿಯಾನದ ಸಂಚಾಲಕ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಮಾತನಾಡಿ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಅತಿ ಶೀಘ್ರವಾಗಿ ಸಾರ್ವಜನಿಕರು ಎಲ್ಲೂ ಪಾಲ್ಗೊಳ್ಳುವಂತೆ ಸಾರಿಗೆ ಅದಾಲತ್ ನಡೆಸಬೇಕು. ಬಾಡಿ ಕ್ಯಾಮರಾ ಅಳವಡಿಸಬೇಕು. ಆರ್‍ಟಿಒದಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳ ವೀಡಿಯೋ ಚಿತ್ರೀಕರಣ ಮಾಡಬೇಕು. ಕಚೇರಿಯ ಎಲ್ಲಾ ದಾಖಲೆಗಳು ಡಿಜಿಟಲೀಕರಣ ಮಾಡಬೇಕು. ಜನಸಾಮಾನ್ಯರೊಂದಿಗೆ ಅಧಿಕಾರಿಗಳು ಸೌಜನ್ಯವಾಗಿ ಮಾತನಾಡಬೇಕು. ಏಜೆಂಟು ವ್ಯವಹಾರ ನಿಲ್ಲಿಸಬೆಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಸದಸ್ಯ ಜಾನ್ ಸಿರಿಲ್ ಉಪಸ್ಥಿತರಿದ್ದರು.







