ಮಡಿಕೇರಿಯಲ್ಲಿ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆ: ಬದಲಿ ಜಾಗ ಗುರುತಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಡಿ.23: ಮಡಿಕೇರಿ ನಗರದ ಐತಿಹಾಸಿಕ ಪ್ರದೇಶವಾದ ಸ್ಟೋನ್ ಹಿಲ್ ಗುಡ್ಡದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ನಿಲ್ಲಿಸಲು ಹಾಗೂ ಬದಲಿ ಜಾಗ ಗುರುತಿಸಿ ಸ್ಥಳೀಯ ನಗರಸಭೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಮುಂದಿನ 4 ವಾರದಲ್ಲಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ಮಡಿಕೇರಿ ನಗರದ ಐತಿಹಾಸಿಕ ಪ್ರದೇಶವಾದ ಸ್ಟೋನ್ ಹಿಲ್ ಗುಡ್ಡದ ನಗರಸಭೆ ಅನಧಿಕೃತವಾಗಿ ಮತ್ತು ಅವೈಜ್ಞಾನಿಕವಾಗಿ ತ್ಯಾಜ್ಯ ಸುರಿಯುತ್ತಿರುವುದನ್ನು ಪ್ರಶ್ನಿಸಿ ಸ್ಥಳೀಯ ನಿವಾಸಿಗಳ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ನಗರಸಭೆ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ತ್ಯಾಜ್ಯ ವಿಲೇವಾರಿಗೆ ಪರ್ಯಾಯ ಜಾಗ ಗುರುತಿಸಿ ಡಿ.11ರಂದು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಸರಕಾರದ ಪರ ವಕೀಲರನ್ನು ಪ್ರಶ್ನಿಸಿದ ಪೀಠ ಈ ಪ್ರಸ್ತಾವನೆಗೆ ಅನುಮೋದನೆ ನೀಡಲು ಎಷ್ಟು ಕಾಲಾವಕಾಶ ಬೇಕು ಎಂದಿತು.
ಇದಕ್ಕೆ ಉತ್ತರಿಸಿದ ಸರಕಾರದ ಪರ ವಕೀಲರು, ಸದ್ಯ ಅಧಿಕಾರಿಗಳು ಗ್ರಾಮ ಪಂಚಾಯತ್ ಚುನಾವಣೆ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕನಿಷ್ಠ ನಾಲ್ಕು ವಾರ ಕಾಲಾವಕಾಶ ಬೇಕು ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ನಾಲ್ಕು ವಾರಗಳಲ್ಲಿ ಪ್ರಸ್ತಾವನೆ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸರಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಜ.25ಕ್ಕೆ ಮುಂದೂಡಿತು.







