ಜ.1ರಿಂದ ಶಾಲೆ ಪ್ರಾರಂಭ ಖಚಿತ: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ಬೆಂಗಳೂರು, ಡಿ.23: ಜನವರಿ 1ನೇ ತಾರೀಖಿನಿಂದಲೇ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದ್ದು, ಈ ಸಂಬಂಧ ಯಾವುದೇ ಬದಲಾವಣೆ ಆಗಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಸ್ಪಷ್ಟನೆ ನೀಡಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಹೊಸ ರೂಪಾಂತರಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ದೇಶದ ಜನರಿಗೆ ಧೈರ್ಯ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಜ. 1 ರಿಂದ 10, 12 ತರಗತಿಗಳು ಪ್ರಾರಂಭಿಸುತ್ತಿದ್ದೇವೆ ಎಂದು ನುಡಿದರು.
ರೂಪಾಂತರಿತ ಕೋವಿಡ್ ವೈರಸ್ ಅನ್ನು ರಾಜ್ಯದಲ್ಲಿ ನಿಯಂತ್ರಿಸುವಲ್ಲಿ ತಜ್ಞರ ಸಮಿತಿ ಸದೃಢವಾಗಿದ್ದು, ಈ ಸಂಬಂಧ ನೀಡಿರುವ ವರದಿ ಆಧರಿಸಿ, ನಾವು ಶಾಲೆಗಳನ್ನು ಆರಂಭಿಸುತ್ತಿದ್ದೇವೆ. ಹಾಗಾಗಿ, ವಿದ್ಯಾರ್ಥಿಗಳು ಅಪಪ್ರಚಾರಗಳಿಗೆ ಕಿವಿಗೊಡದೆ ಶಾಲೆಗೆ ಬನ್ನಿ ಎಂದು ತಿಳಿಸಿದರು.
ಈಗ ಹೊಸ ವೈರಸ್ ಬಗ್ಗೆ ಅವಲೋಕಿಸಲು ಇನ್ನು 8 ದಿನಗಳ ಸಮಯವಿದೆ, ಹೊಸ ವೈರಸ್‍ನ ನಿಜವಾದ ಶಕ್ತಿ ಎಷ್ಟು ಎಂಬುವುದನ್ನು ಅವಲೋಕಿಸುತ್ತೇವೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಏನು ಸಲಹೆ ನೀಡುತ್ತೆ ಅದರಂತೆ ಮುನ್ನಡೆಯುತ್ತೇವೆ ಎಂದು ಅವರು ಹೇಳಿದರು.







