ಅನುಮತಿ ಪಡೆಯದೆ ಪಂಜಾಬ್ ರೈತನ ಫೋಟೊ ಜಾಹೀರಾತಿನಲ್ಲಿ ಪ್ರಕಟಿಸಿದ ಬಿಜೆಪಿ: ನೋಟಿಸ್ ನೀಡಿದ ರೈತ
ರೈತರು ಖುಷಿಯಾಗಿದ್ದಾರೆಂದು ತೋರಿಸಲು ನನ್ನ ಫೋಟೊ ಬಳಸಿಕೊಂಡಿದ್ದಾರೆ

ಹೊಸದಿಲ್ಲಿ: ಹೊಸ ಕೃಷಿ ಕಾನೂನುಗಳನ್ನು ಪ್ರಚಾರ ಮಾಡುವ ಜಾಹೀರಾತಿಗೆ ಅನುಮತಿ ಪಡೆಯದೆ ತನ್ನ ಫೋಟೊವೊಂದನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ದಿಲ್ಲಿಯ ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ಪಂಜಾಬ್ ನ ರೈತರೊಬ್ಬರು ಬಿಜೆಪಿಗೆ ಕಾನೂನು ನೋಟಿಸ್ ನ್ನು ಕಳುಹಿಸಿಕೊಟ್ಟಿದ್ದಾರೆ.
ಹೊಶಿಯಾರ್ಪುರ ನಿವಾಸಿ 36ರ ಹರೆಯದ ಹರ್ಪ್ರೀತ್ ಜಾಹೀರಾತಿನಲ್ಲಿ ತನ್ನ ಭಾವಚಿತ್ರ ಬಳಸಲಾಗಿದೆ ಎಂಬ ವಿಚಾರ ತಿಳಿದ ತಕ್ಷಣ ಮಂಗಳವಾರ ಸಂಜೆ ನೋಟಿಸ್ ಕಳುಹಿಸಿದ್ದಾರೆ. ಬಿಜೆಪಿ ಇದೀಗ ಆ ಜಾಹೀರಾತನ್ನು ಹಿಂಪಡೆದಿದೆ.
ಪಂಜಾಬ್ ಬಿಜೆಪಿಯ ಫೇಸ್ ಬುಕ್ ಪೇಜ್ ನಲ್ಲಿ ಹಾಕಲಾಗಿರುವ ಜಾಹೀರಾತಿನಲ್ಲಿ ನನ್ನ ಫೋಟೊವನ್ನು ಬಳಸಲಾಗಿದೆ ಎಂದು ನನ್ನ ಸ್ನೇಹಿತ ಸೋಮವಾರ ಮಾಹಿತಿ ನೀಡಿದ. ನನ್ನ ಪೋಟೊ ನನ್ನ ಇನ್ ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ಪೇಜ್ ಗಳಲ್ಲಿ ಲಭ್ಯವಿತ್ತು ಎಂದು ನಟ ಹಾಗೂ ಚಿತ್ರ ನಿರ್ಮಾಪಕನೂ ಆಗಿರುವ ಸಿಂಗ್ The Print ಗೆ ಬುಧವಾರ ತಿಳಿಸಿದ್ದಾರೆ.
ಬಿಜೆಪಿ ಹಾಗೂ ಇತರರು ಜಾಹೀರಾತಿಗಾಗಿ ನನ್ನ ಫೋಟೊವನ್ನು ಈ ಹಿಂದೆಯೂ ಬಳಸಿದ್ದರು. ಆದರೆ ಈ ಬಾರಿ ನನ್ನ ಅನುಮತಿ ಪಡೆಯದೆ, ರೈತರ ಪ್ರತಿಭಟನೆಯಂತಹ ಸಮಯದಲ್ಲಿ ಹೀಗೆ ಮಾಡಿದ್ದಾರೆ. ಮೂರು ಕೃಷಿ ಕಾನೂನುಗಳಿಂದ ಪಂಜಾಬ್ ರೈತರು ಖುಷಿಯಾಗಿದ್ದಾರೆಂದು ತೋರಿಸಲು ನನ್ನ ಫೋಟೊವನ್ನು ಅವರು ಬಳಸಿಕೊಂಡಿದ್ದಾರೆ. ಸತ್ಯಾಂಶ ವೇನೆಂದರೆ ಪಂಜಾಬ್ ರೈತರು ಕೃಷಿ ಕಾನೂನಿನಿಂದ ಸಂತೃಪ್ತರಾಗಿಲ್ಲ. ಇದನ್ನು ರದ್ದುಪಡಿಸಲು ಆಗ್ರಹಿಸಿ ಅವರು ಪ್ರತಿಭಟಿಸುತ್ತಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.







