ಡಿಟಿಎಚ್ ಮಾರ್ಗಸೂಚಿ ಪರಿಷ್ಕರಣೆಗೆ ಸಂಪುಟ ಅನುಮೋದನೆ

ಹೊಸದಿಲ್ಲಿ, ಡಿ.23: ದೇಶದಲ್ಲಿ ಡಿಟಿಎಚ್ ಸೇವೆ ಒದಗಿಸಲು ಇರುವ ಮಾರ್ಗಸೂಚಿಯನ್ನು ಪರಿಷ್ಕರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಹೊಸ ಮಾರ್ಗಸೂಚಿ ಪ್ರಕಾರ ಡಿಟಿಎಚ್ ಸೇವೆಯ ಲೈಸೆನ್ಸ್ ಅವಧಿ 20 ವರ್ಷದ್ದಾಗಿರುತ್ತದೆ. ಇದುವರೆಗೆ ಲೈಸೆನ್ಸ್ ಅವಧಿ 10 ವರ್ಷಕ್ಕೆ ಸೀಮಿತವಾಗಿತ್ತು. ಡಿಟಿಎಚ್ ಕ್ಷೇತ್ರದಲ್ಲಿ 100ಶೇ. ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ)ಗೆ ಅವಕಾಶವಿರುತ್ತದೆ. ಇದುವರೆಗೆ 49 ಶೇ. ಎಫ್‌ಡಿಐಗೆ ಅವಕಾಶವಿತ್ತು. ಈ ನಿಟ್ಟಿನಲ್ಲಿ ಭಾರತದ ಟೆಲಿಕಾಂ ನಿಯಂತ್ರಕ ಪ್ರಾಧಿಕಾರದೊಂದಿಗೆ ಚರ್ಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಹೊಸ ಮಾರ್ಗಸೂಚಿಗೆ ಅನುಮೋದನೆ ದೊರಕಿದೆ.
ಇದುವರೆಗೆ ಲೈಸೆನ್ಸ್ ಶುಲ್ಕ ಒಟ್ಟು ಆದಾಯದ 10 ಶೇ. ಆಗಿದ್ದರೆ, ಇನ್ನು ಮುಂದೆ ಸರಿಹೊಂದಿಸಿದ ಒಟ್ಟು ಆದಾಯ (ಎಜಿಆರ್)ದ 8 ಶೇ. ಆಗಿರುತ್ತದೆ. ಒಟ್ಟು ಆದಾಯದಿಂದ ಜಿಎಸ್‌ಟಿ ಕಳೆಯುವ ಮೂಲಕ ಎಜಿಆರ್ ಲೆಕ್ಕಹಾಕಲಾಗುತ್ತದೆ. ಈಗ ಇರುವ ವಾರ್ಷಿಕ ಆಧಾರದ ಬದಲು, 4 ತಿಂಗಳಿಗೊಮ್ಮೆ ಲೈಸೆನ್ಸ್ ಶುಲ್ಕ ಸಂಗ್ರಹಿಸಲಾಗುತ್ತದೆ. ಪ್ಲಾಟ್‌ಫಾರ್ಮ್ ಚಾನೆಲ್‌ನ ಒಟ್ಟು ಚಾನೆಲ್‌ಗಳಲ್ಲಿ ಗರಿಷ್ಟ 5 ಶೇ. ನಷ್ಟು ಕಾರ್ಯನಿರ್ವಹಿಸಲು ಡಿಟಿಎಚ್ ನಿರ್ವಾಹಕರಿಗೆ ಅನುಮತಿ ನೀಡಲಾಗುತ್ತದೆ. ಡಿಟಿಎಚ್ ನಿರ್ವಾಹಕರಿಗೆ ಪ್ರತೀ ಪ್ಲಾಟ್‌ಫಾರ್ಮ್ ಸೇವಾ ಚಾನೆಲ್‌ಗಳಿಗೆ 10,000 ರೂ. ಮೊತ್ತವನ್ನು ಒಂದು ಬಾರಿ ಮರುಪಾವತಿಸಲಾಗದ ನೋಂದಣಿ ಶುಲ್ಕವಾಗಿ ವಿಧಿಸಲಾಗುತ್ತದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.
ಚಲನಚಿತ್ರಗಳ ವಿಭಾಗ, ಚಲನಚಿತ್ರೋತ್ಸವಗಳ ನಿರ್ದೇಶನಾಲಯ, ಭಾರತದ ರಾಷ್ಟ್ರೀಯ ಚಲನಚಿತ್ರ ದಾಖಲೆ ವಿಭಾಗ, ಭಾರತದ ಮಕ್ಕಳ ಚಲನಚಿತ್ರ ಸೊಸೈಟಿ- ಈ ಸಂಸ್ಥೆಗಳನ್ನು ರಾಷ್ಟ್ರೀಯ ಸಿನೆಮ ಅಭಿವೃದ್ಧಿ ನಿಗಮದೊಂದಿಗೆ ವಿಲೀನಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ. ಮುಂದಿನ 5 ವರ್ಷಗಳಲ್ಲಿ ಪರಿಶಿಷ್ಟ ಜಾತಿ(ಎಸ್‌ಸಿ)ಯ 4 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ 59,000 ಕೋಟಿ ರೂ. ಮೊತ್ತದ ಮೆಟ್ರಿಕೋತ್ತರ ಸ್ಕಾಲರ್‌ಶಿಪ್ ಯೋಜನೆಗೆ ಅನುಮೋದನೆ ದೊರಕಿದೆ. ಇದರಲ್ಲಿ ಕೇಂದ್ರದ ಪಾಲು 35,534 ಕೋಟಿ ರೂ., ಉಳಿದ ಮೊತ್ತವನ್ನು ರಾಜ್ಯ ಸರಕಾರಗಳು ಭರಿಸಲಿವೆ ಎಂದು ಸಚಿವರು ಹೇಳಿದ್ದಾರೆ.







