ಜಾತಿ-ಧರ್ಮದ ಆಧಾರದಲ್ಲಿ ನಿಗಮ ಸ್ಥಾಪನೆ ಪ್ರಶ್ನಿಸಿ ಮತ್ತೊಂದು ಅರ್ಜಿ: ಸರಕಾರಕ್ಕೆ ಹೈಕೋರ್ಟ್ ನಿಂದ ನೋಟಿಸ್

ಬೆಂಗಳೂರು, ಡಿ.23: ಜಾತಿ ಮತ್ತು ಧರ್ಮದ ಆಧಾರದಲ್ಲಿ ನಿಗಮ-ಮಂಡಳಿ ಸ್ಥಾಪನೆ ಮಾಡಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಮತ್ತೊಂದು ಪಿಐಎಲ್ ಸಲ್ಲಿಕೆಯಾಗಿದೆ. ಈ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ವಕೀಲ ಎಸ್.ಬಸವರಾಜ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.
ಕೆಲ ಕಾಲ ವಾದ ಆಲಿಸಿದ ಪೀಠ, ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜ.8ಕ್ಕೆ ಮುಂದೂಡಿತು. ಅಲ್ಲದೆ, ಈ ಅರ್ಜಿಯನ್ನು ಜಾತಿ-ಧರ್ಮ ಆಧಾರದ ಮೇಲೆ ನಿಗಮ ಮಂಡಳಿ ಸ್ಥಾಪನೆಯನ್ನು ಪ್ರಶ್ನಿಸಿರುವ ಇತರೆ 2 ಅರ್ಜಿಗಳೊಂದಿಗೆ ವಿಚಾರಣೆಗೆ ನಿಗದಿಪಡಿಸಲು ಸೂಚಿಸಿತು.
ವಿಚಾರಣೆ ವೇಳೆ ಅರ್ಜಿದಾರ ವಕೀಲ ಎಸ್.ಬಸವರಾಜ್ ವಾದಿಸಿ, ನಿರ್ದಿಷ್ಟ ಜಾತಿ-ಧರ್ಮಕ್ಕೊಂದು ನಿಗಮ-ಮಂಡಳಿ ಸ್ಥಾಪಿಸುವುದು ಸಂವಿಧಾನದ ಮೂಲ ತತ್ವವಾಗಿರುವ ಜಾತ್ಯಾತೀತ ಆಶಯಕ್ಕೆ ವಿರುದ್ಧವಾಗಿದೆ. ಜಾತಿಗೊಂದು ನಿಗಮ ಸ್ಥಾಪಿಸುವ ಅಧಿಕಾರವೂ ರಾಜ್ಯ ಸರಕಾರಕ್ಕೆ ಇಲ್ಲ. ಹೀಗಾಗಿ, ಜಾತಿ ಹೆಸರಿನಲ್ಲಿ ಮಂಡಳಿ ರಚಿಸಿ ಸರಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ಅರ್ಜಿಯಲ್ಲಿ, ಕರ್ನಾಟಕ ಮರಾಠ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿ, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯನ್ನು ಪ್ರಶ್ನಿಸಲಾಗಿದೆ.







