ವಸತಿ ಅಪಾರ್ಟ್‌ಮೆಂಟ್ ರಕ್ಷಣೆ ಕೋರಿ ನಟಿ ಕಂಗನಾ ರಾಣಾವತ್ ಸಲ್ಲಿಸಿದ ಮನವಿ ತಿರಸ್ಕೃರಿಸಿದ ನ್ಯಾಯಾಲಯ

ಮುಂಬೈ, ಡಿ. 23: ಮುಂಬೈಯ ಉಪನಗರದ ತನ್ನ ವಸತಿ ಅಪಾರ್ಟ್ ಮೆಂಟ್‌ನಲ್ಲಿರುವ ಫ್ಲ್ಯಾಟ್ ಅನ್ನು ರಕ್ಷಿಸುವಂತೆ ಕೋರಿ ನಟಿ ಕಂಗನಾ ರಾಣಾವತ್ ಸಲ್ಲಿಸಿದ ಮನವಿಯನ್ನು ಮುಂಬೈಯ ಸಿವಿಲ್ ನ್ಯಾಯಾಲಯ ತಿರಸ್ಕರಿಸಿದೆ. 2018ರಲ್ಲಿ ಬೃಹನ್ಮುಂಬೈ ಮಹಾ ನಗರ ಪಾಲಿಕೆ (ಬಿಎಂಸಿ)ಯಿಂದ ನೋಟಿಸು ಸ್ವೀಕರಿಸಿದ ಬಳಿಕ ಕಂಗನಾ ರಾಣಾವತ್ ಸಲ್ಲಿಸಿದ ಮೊಕದ್ದಮೆಯ ವಿಚಾರಣೆಯನ್ನು ದಿಂಡೋಶಿ ಸಿವಿಲ್ ನ್ಯಾಯಾಲಯ ನಡೆಸಿತು.
ಖಾರ್‌ನ ತನ್ನ ವಸತಿ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ನ ಒಂದು ಭಾಗವನ್ನು ಧ್ವಂಸಗೊಳಿಸುವಂತೆ ಬಿಎಂಸಿ 2018ರಲ್ಲಿ ಜಾರಿಗೊಳಿಸಿದ ಆದೇಶದ ವಿರುದ್ಧ ಕಂಗನಾ ರಾಣಾವತ್ ಮುಂಬೈ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಂಗನಾ ರಾಣಾವತ್ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೆ, ಮುಂಬೈ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು 6 ವಾರಗಳ ಕಾಲಾವಕಾಶ ನೀಡಿದೆ. ಮುಂಬೈಯ ಪಶ್ಚಿಮ ಖಾರ್‌ನಲ್ಲಿರುವ ಆರ್ಕಿಡ್ ಬ್ರೀಝ್ ಹೆಸರಿನ ಕಟ್ಟಡದ 5ನೇ ಮಹಡಿಯಲ್ಲಿರುವ ಕಂಗನಾ ರಾಣಾವತ್ ಅವರ 5 ಫ್ಲ್ಯಾಟ್‌ಗಳ ನಿರ್ಮಾಣ ಅನಧಿಕೃತ ಎಂಬ ಕಾರಣಕ್ಕೆ ಬಿಎಂಸಿ 2018ರಲ್ಲಿ ನೋಟಿಸು ಜಾರಿ ಮಾಡಿತ್ತು.





